ಬೆಳ್ತಂಗಡಿ: ಮರಗಳ್ಳರ ತಂಡವೊಂದರ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಮರ ಹಾಗೂ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕೋಟೆಕಾರು ನಿವಾಸಿ ಅಬ್ಬಾಸ್ (46), ಕಕ್ಕಿಂಜೆ ಗಾಂಧೀನಗರ ನಿವಾಸಿ ಮಹಮ್ಮದ್ ಸೂಫಿ (34) ಹಾಗೂ ಗುಂಡ್ಯ ನಿವಾಸಿ ಸುರೇಶ (36) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಕೌಕ್ರಾಡಿ ಹೊಸಮಜಲು ನಿವಾಸಿ ಮಹಮ್ಮದ್ ಎಂಬಾತ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಅರಣ್ಯದಿಂದ ಬೀಟೆ ಹಾಗೂ ಸಾಗುವಾನಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯವರು ಧರ್ಮಸ್ಥಳ ಸಮೀಪ ಪುದುವೆಟ್ಟು ಕ್ರಾಸ್ನಲ್ಲಿ ಕಾದು ಕುಳಿತು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಟಾಟಾ ಸಿಯಾರಾ ಕಾರಿನಲ್ಲಿ ಮರ ಸಾಗಾಟ ಮಾಡುತ್ತಿದ್ದರು. ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಇವರಿಂದ 5 ಸಾಗುವಾನಿ ಮರದ ತುಂಡುಗಳು, ಐದು ಬೀಟೆ ಮರದ ತುಂಡು, ಎರಡು ಗರಗಸಗಳು, ಕತ್ತಿ ಹಾಗೂ ಹಗ್ಗವನ್ನು ಹಾಗೂ ಇವರು ಉಪಯೋಗಿಸಿದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.