ಮಂಗಳೂರು: ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆಯು ಇಂದು ಬೆಳಗ್ಗೆ ಹಂಪನಕಟ್ಟೆಯ ಬಳಿಯಿರುವ ಮಿನಿ ವಿಧಾನಸೌಧದ ಬಳಿಯ ಎನ್ಜಿಒ ಸಭಾಂಗಣದಲ್ಲಿ ನಡೆಯಿತು.
ಇಂದು 216 ಮಂದಿಗೆ 10 ಸಾವಿರ ರೂಪಾಯಿಯಂತೆ ಸರಿ ಸುಮಾರು 21,40,000 ರೂಪಾಯಿ, ಭಾಗಶಃ ಹಾನಿಯಾದ 5 ಮನೆಗಳಿಗೆ 95 ಸಾವಿರ ರೂಪಾಯಿಯಂತೆ 27,500 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಲಾಯಿತು. ಮುಂದಿನ ಬಾರಿ ಸಂಪೂರ್ಣ ಹಾನಿಗೊಳಗಾದ ಮನೆಯವರಿಗೆ ತಲಾ 5 ಲಕ್ಷ ರೂಪಾಯಿಯಂತೆ ಪರಿಹಾರದ ಚೆಕ್ ನೀಡಲಾಗುತ್ತದೆ. ಇದರಲ್ಲಿ ಪದವು, ಜಪ್ಪಿನಮೊಗರು, ಬಜಾಲ್, ಬೆಂಗ್ರೆ, ಬೋಳೂರು ಹಾಗೂ ಇತರ ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿ ಸ್ವಲ್ಪ ಮಟ್ಟಿನ ತೊಂದರೆಗಳಾದರೆ 3,800 ರೂ. ಪರಿಹಾರ ಕೊಡಲಾಗುತ್ತಿತ್ತು. ಆದರೆ ಈ ವರ್ಷ ಅದು ಹತ್ತು ಸಾವಿರ ರೂ.ಗೆ ಏರಿದೆ. ಸಂಪೂರ್ಣ ಮನೆ ಹಾನಿಗೆ 95,100 ರೂ. ಕೊಡಲಾಗುತ್ತಿತ್ತು. ಆದರೆ ಈ ಬಾರಿ ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಅಲ್ಲದೆ ಆ ಕುಟುಂಬ ಮನೆ ಕಟ್ಟುವವರೆಗೆ ಒಂದು ವರ್ಷಗಳ ಕಾಲ ಮನೆ ಬಾಡಿಗೆ ಕೊಡಲು ತಿಂಗಳಿಗೆ ತಲಾ 5 ಸಾವಿರ ರೂ. ನೀಡಲಾಗುತ್ತದೆ. ಸ್ವಾತಂತ್ರ್ಯದ ಬಳಿಕ ಪ್ರಾಕೃತಿಕ ವಿಕೋಪಕ್ಕೆ ಈ ಬಾರಿ ದೊರಕಿದಷ್ಟು ದೊಡ್ಡ ಮೊತ್ತದ ಪರಿಹಾರ ಯಾವತ್ತೂ ದೊರಕಿಲ್ಲ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮಂಗಳೂರಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.