ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯೆ ನಡೆದ ಕಾದಾಟದಲ್ಲಿ ಎರಡು ವರ್ಷದ ಹುಲಿ ಮರಿಯೊಂದು ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಹುಲಿಗಳ ಮಧ್ಯೆ ನಡೆದ ಕಾಳಗದಲ್ಲಿ ಹುಲಿ ಮರಿ ತೀವ್ರವಾಗಿ ಗಾಯಗೊಂಡಿತ್ತು.
ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ. ವಿಷ್ಣು ದತ್, ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆಯಿಂದ ಹುಲಿ ಮರಿ ಚೇತರಿಸಿಕೊಂಡಿದ್ದು, ಸಹಜ ಸ್ಥಿತಿಗೆ ಮರಳಿತ್ತು. ಆದರೆ ನವೆಂಬರ್ 11ರ ಮಧ್ಯಾಹ್ನ ಆರೋಗ್ಯ ಮತ್ತೆ ಏರುಪೇರುಗೊಂಡಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೆ ಆಸುನೀಗಿದೆ.
ಮೃತ ಹುಲಿ ಮರಿಯ ಮರೋಣೋತ್ತರ ಪರೀಕ್ಷೆ ನಡೆಸಿದಾಗ ಕಿಡ್ನಿ ಮತ್ತು ಅಂಗಾಂಗಳ ವೈಫಲ್ಯ ಕಂಡುಬಂದಿದೆ ಎಂದು ಡಾ.ವಿಷ್ಣು ದತ್ ತಿಳಿಸಿದ್ದಾರೆ.ಮೃತ ಹುಲಿಯ ಅಂಗಾಂಗಗಳ ಮಾದರಿಯನ್ನು ಉತ್ತರ ಪ್ರದೇಶದ ಐ.ವಿ.ಆರ್.ಐ, ಬರೇಲಿ ಮತ್ತು ಬೆಂಗಳೂರಿನ ಐ.ಎ.ಹೆಚ್.ಅಂಡ್ವಿ.ಬಿ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಇದನ್ನೂ ಓದಿ: ತಾವರೆಕೊಪ್ಪ ಹುಲಿ ಸಿಂಹಧಾಮದ ದೀರ್ಘಾಯುಷಿ ಹನುಮ ಇನ್ನಿಲ್ಲ
ಮೃತಪಟ್ಟ ಹುಲಿ ಮರಿ ಪಿಲಿಕುಳದಲ್ಲೇ ಜನಿಸಿತ್ತು. ಪಿಲಿಕುಳದಲ್ಲಿ ಸದ್ಯ 11 ಹುಲಿಗಳು ಇವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರಾದ ಹೆಚ್ ಜೆ ಭಂಡಾರಿ ತಿಳಿಸಿದ್ದಾರೆ.