ಮಂಗಳೂರು: ದೇಶಕ್ಕೆ ಗಾಂಧಿ ಬೇಕಾ,ಕೌಶಲ್ಯ - ದಶರಥ, ರಾಮ ಬೇಕಾ, ಬೇಕಾ ಅಥವಾ ಕ್ರೌರ್ಯ ಮತ್ತು ನಾಥೂರಾಮ ಬೇಕಾ? ಮಾನವೀಯ ಮೌಲ್ಯಗಳು ಬೇಕಾ ಅಥವಾ ಕ್ರೌರ್ಯ ಬೇಕಾ ಎಂದು ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯುವ ಜನತೆಯನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ನಡೆದ ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇಪತ್ಯಕ್ಕೆ ಸರಿಯುತ್ತಿದ್ದ ಅಂಬೇಡ್ಕರ್, ಗಾಂಧಿ, ಭಗತ್ಸಿಂಗ್ ಚರಿತ್ರೆಗಳು ನಿಮ್ಮಿಂದಾಗಿ ಮರುಜೀವ ಪಡೆಯಬೇಕಿದೆ. ನಿಮ್ಮ ಜನ ವಿರೋಧಿ ನೀತಿಗಳಿಂದ ನಾವೆಲ್ಲ ಒಂದಾಗುವಂತಾಗಿದೆ. ಯುವ ಜನತೆ ಸಾಮಾಜಿಕ ಜಾಲತಾಣ, ಸಿನಿಮಾ, ಟಿವಿಗಳ ಪ್ರಭಾವದಿಂದ ತ್ರಿವರ್ಣ ಧ್ವಜ ಹಿನ್ನೆಲೆಗೆ ಸರಿದಿತ್ತು. ಮೋದಿ, ಶಾ ಇಂತಹ ಕಾಯ್ದೆ ರೂಪಿಸಿ ಯುವ ಸಮೂಹವನ್ನು ಒಟ್ಟುಗೂಡಿಸಿದೆ ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಎನ್ಆರ್ಸಿ, ಎನ್ಪಿಆರ್, ಸಿಎಎ ತಿರಸ್ಕರಿಸುವುದು ನಮ್ಮೆಲ್ಲರ ಜನ್ಮ ಸಿದ್ಧ ಹಕ್ಕು ಹಾಗೂ ಕರ್ತವ್ಯ. ಕೇವಲ ಭಾಷಣ ಓದಿ, ಹೋರಾಟಕ್ಕೆ ಮುಂದಾಗದಿದ್ದ ನಾಯಕರು, ಪಕ್ಷಗಳು ಹಾಗೂ ಕಾರ್ಯಕರ್ತರಿದ್ದರೆ ಅವರಂತಹ ದೇಶದ್ರೋಹಿಗಳು ಮತ್ತೊಬ್ಬರಿಲ್ಲ ಎಂದು ರಮೇಶ್ ಟೀಕಿಸಿದ್ದಾರೆ.
ಟ್ರಂಪ್ ಕರೆಸಿ ಗೋಳವಾಳ್ಕರ್ ಸಮಾಧಿ ತೋರಿಸಲಿಲ್ಲ. ಸಬರಮತಿ ಆಶ್ರಮ, ರಾಜ್ಘಾಟ್ಗೆ ಕರೆದುಕೊಂಡು ಹೋದರು. ಇವರ ಪರಿಸ್ಥಿತಿ ಇಷ್ಟೊಂದು ದುಃಸ್ಥಿತಿಗೆ ತಲುಪಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರಿದರು.