ಮಂಗಳೂರು : ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣನ್ನು ಕರ್ನಾಟಕದಲ್ಲಿ ತಿನ್ನುವ ಇಚ್ಛೆ ಇದೆಯೇ?. ಹಾಗಾದರೆ ನೀವೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ತಟದಲ್ಲಿರುವ ತೆಕ್ಕಾರು ಎನ್ನುವ ಹಳ್ಳಿಗೆ ಬರಬೇಕು. ಹೌದು ಇಲ್ಲಿನ ಕೃಷಿಕ ಲಕ್ಷ್ಮಣ್ ವಿದೇಶಿ ಹಣ್ಣುಗಳನ್ನು ಬೆಳೆದು ಅವುಗಳನ್ನ ದೇಶದಾದ್ಯಂತ ಪೂರೈಕೆ ಮಾಡುತ್ತಿದ್ದಾರೆ.
ಮೂಲತಃ ಬೆಂಗಳೂರಿನ ಪೀಣ್ಯ ನಿವಾಸಿಯಾಗಿರುವ ಲಕ್ಷ್ಮಣ್ ಹನ್ನೆರಡು ವರ್ಷಗಳ ಹಿಂದೆ ಕೃಷಿ ಮಾಡಲೆಂದೇ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಮನಸು ಮಾಡಿದರೆ, ಬೆಂಗಳೂರಿನಲ್ಲಿ ಉದ್ಯಮ ನಡೆಸಿ ಹೆಚ್ಚು ಹಣ ಸಂಪಾದಿಸಬಹುದಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೃಷಿ ಮಾಡಿದರೆ ಹೇಗೆ ಎಂದುಕೊಂಡು ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ತಟದಲ್ಲಿರುವ ತೆಕ್ಕಾರು ಎನ್ನುವ ಹಳ್ಳಿಯಲ್ಲಿ ಸುಮಾರು 40 ಎಕರೆ ಜಾಗವನ್ನು ಖರೀದಿಸಿ ಕೃಷಿಯ ಕಸಿಗೆ ಇಳಿದಿದ್ದರು.
ಮಲೇಶಿಯಾ, ಇಂಡೋನೇಶಿಯಾ, ಥಾಯ್ಲೆಂಡ್ ಮೊದಲಾದ ಭಾಗಗಳಲ್ಲಿ ಬೆಳೆಯುವ ರಂಬೂಟಾನ್ ಹಣ್ಣಿನ ಗಿಡವನ್ನು ಬೆಳೆಸಲು ಆರಂಭಿಸಿದ ಲಕ್ಷ್ಮಣ್ ಮೊದಲಿಗೆ 500 ರಂಬೂಟಾನ್ ಗಿಡಗಳನ್ನು ತಂದು ನಾಟಿ ಮಾಡಿದ್ದರು. ನೆಟ್ಟ ನಾಲ್ಕು ವರ್ಷದಲ್ಲೇ ಫಲಕೊಡಲು ಆರಂಭಿಸಿತು. ಇದರಿಂದ ಮತ್ತಷ್ಟು ಹರ್ಷಿತರಾದ ಲಕ್ಷ್ಮಣ್, ಮತ್ತೆ 3500 ಸಾವಿರ ಗಿಡಗಳನ್ನು ನಾಟಿ ಮಾಡಿದ್ದರು.
20 ಎಕರೆ ಜಾಗದಲ್ಲಿ ರಂಬೂಟಾನ್ ಹಣ್ಣು ಬೆಳೆಸಲಾಗುತ್ತಿದ್ದು, ಉಳಿದ ಜಾಗದಲ್ಲಿ ಅಡಕೆ ಸೇರಿದಂತೆ ಮಿಶ್ರ ಕೃಷಿಯನ್ನು ಮಾಡುತ್ತಿದ್ದಾರೆ. ಅಡಕೆ ತೋಟದ ಮಧ್ಯೆಯೇ ಮ್ಯಾಂಗೋಸ್ಟಿನ್ ಬೆಳೆಯುತ್ತಿರುವ ಲಕ್ಷ್ಮಣ್ , ಡ್ರ್ಯಾಗನ್ ಫ್ರುಟ್ ಸೇರಿದಂತೆ ಸುಮಾರು 22 ಕ್ಕೂ ಮಿಕ್ಕಿದ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
ಇದನ್ನೂ ಓದಿ: ಮೂರೆಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈ ತುಂಬ ಸಂಪಾದನೆ: ಸಹೋದರರ ಕೃಷಿ ಖುಷಿ!
ಇನ್ನು ಅದರಲ್ಲೂ ರಂಬೂಟಾನ್ ಬೆಳೆ ಲಕ್ಷ್ಮಣ್ ಅವರ ಕೈ ಹಿಡಿದಿದ್ದು, ಕಳೆದ ವರ್ಷ ನೂರಾರು ಟನ್ ಇಳುವರಿಯನ್ನು ಪಡೆದಿದ್ದಾರೆ. ಈ ಬಾರಿಯೂ ಅದಕ್ಕಿಂತಲೂ ಹೆಚ್ಚುವರಿ ಇಳುವರಿ ಪಡೆಯುವ ವಿಶ್ವಾಸದಲ್ಲಿದ್ದು, ಬೆಳೆದ ಹಣ್ಣಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಅಷ್ಟಾಗಿ ಬೇಡಿಕೆ ಇಲ್ಲದಿದ್ದರೂ, ಇವರು ಎಲ್ಲ ಹಣ್ಣುಗಳನ್ನು ಚೆನ್ನೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ದೇಶದ ವಿವಿಧ ಪಟ್ಟಣಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಈ ಭಾಗದಲ್ಲಿ ಬೆಳೆದ ಹಣ್ಣುಗಳಿಗೆ ರುಚಿ ಹಾಗು ಗಾತ್ರವೂ ಹೆಚ್ಚಾಗಿರುವ ಕಾರಣಕ್ಕೆ ಈ ಹಣ್ಣುಗಳಿಗೆ ಭಾರಿ ಬೇಡಿಕೆಯೂ ಬರುತ್ತಿದೆ ಎನ್ನುತ್ತಾರೆ ಲಕ್ಷ್ಮಣ್. ರಂಬೂಟಾನ್ ಜೊತೆಗೆ ಮ್ಯಾಂಗೋಸ್ಟಿನ್ ಕೂಡಾ ವರ್ಷಕ್ಕೆ 6 ಟನ್ಗಳಷ್ಟು ಇಳುವರಿ ಕೊಡುತ್ತಿದ್ದು, ಲಕ್ಷ್ಮಣ್ ಅವರು ತೋಟ ವಿದೇಶಿ ಹಣ್ಣುಗಳ ಸಂಗ್ರಹಾಲಯದಂತೆಯೂ ಗೋಚರಿಸುತ್ತಿದೆ.
ಇದನ್ನೂ ಓದಿ: ಉಡುಪಿಯ ಮನೆ ತಾರಸಿ ಮೇಲೆ ಬಗೆಬಗೆ ತರಕಾರಿ, ಹಣ್ಣು ಬೆಳೆ: ನೀವೂ ಬೆಳೆಯಬೇಕೆ?