ಮಂಗಳೂರು: ತನ್ನೂರಿನಲ್ಲಿ ಪಿಯುಸಿ ಕಾಲೇಜು ಆರಂಭಿಸುವ ಕನಸು ಹೊಂದಿರುವ ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬ ಅವರಿಗೆ 5 ಲಕ್ಷ ರೂ ಗಳ ಚೆಕ್ ಹಸ್ತಾಂತರಿಸಲಾಯಿತು. ಬೆಂಗಳೂರಿನ ಆರ್.ವಿ.ಶಿಕ್ಷಣ ಸಂಸ್ಥೆ ವತಿಯಿಂದ ನೀಡಲಾದ 5 ಲಕ್ಷ ರೂ.ಗಳ ಚೆಕ್ನ್ನು ನಗರದ ಜಿಲ್ಲಾ ಪಂಚಾಯತ್‍ನಲ್ಲಿರುವ ಮಿನಿ ಸಭಾಂಗಣದಲ್ಲಿ ಹಾಜಬ್ಬ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್ ಅವರು ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಶೈಕ್ಷಣಿಕ ಪ್ರೀತಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆ ಯಾವುದೇ ರೀತಿಯ ಹೋಲಿಕೆಗೆ ನಿಲುಕದ್ದಾಗಿದೆ ಎಂದರು.
ಹರೆಕಳ ಹಾಜಬ್ಬರ ವಿನಂತಿಯಂತೆ ಆರ್.ವಿ.ಶಿಕ್ಷಣ ಸಂಸ್ಥೆಯವರು ಹಾಜಬ್ಬ ಅವರ ಕನಸಿನ ಪಿಯುಸಿ ಕಾಲೇಜಿನ ಕಟ್ಟಡ ನಿರ್ಮಾಣ ಮಾಡಲು 5 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ, ಇದು ನಿಜಕ್ಕೂ ಅವರ ಕನಸಿಗೆ ನೀರೆರೆಯುವ ಕೆಲಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಆರ್.ವಿ.ಶಿಕ್ಷಣ ಸಂಸ್ಥೆಯ ಡಾ.ಸಂತೋಷ್, ಫೈನಾನ್ಸ್ ಮ್ಯಾನೇಜರ್ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ, ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಮಂಗಳೂರು ದಕ್ಷಿಣ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಹಾಗೂ ಹರೆಕಳ ಸರ್ಕಾರಿ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ: ರಾಯಚೂರಿಗೆ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಮುಖಂಡರಿಂದ ಅದ್ದೂರಿ ಸ್ವಾಗತ