ಮಂಗಳೂರು: ಬಸ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ. ಅದರಿಂದ ಜಾಗೃತಿಯನ್ನು ಮೂಡಿಸಬಹುದು ಎಂದು ಮಂಗಳೂರಿನ ಖಾಸಗಿ ಬಸ್ ಮಾಲೀಕರೊಬ್ಬರು ಸಾಧಿಸಿ ತೋರಿಸಿದ್ದಾರೆ. ಬಸ್ನಿಂದ ಹೇಗೆ ಜಾಗೃತಿ ಮೂಡಿಸೋದು ಅಂತಾ ಯೋಚಿಸುತ್ತಿದ್ದೀರಾ.. ಹಾಗಾದರೆ, ಈ ಸುದ್ದಿ ನೋಡಿ.
ಇತ್ತೀಚೆಗೆ ಸಾಕಷ್ಟು ಡ್ರಗ್ಸ್ ಪ್ರಕರಣ ಪತ್ತೆಯಾಗುತ್ತಿವೆ. ಸೆಲೆಬ್ರಿಟಿಗಳೂ ಜೈಲು ಪಾಲಾಗಿರೋದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಮಂಗಳೂರಿನ ಬಸ್ ಮಾಲೀಕ ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ತಮ್ಮ ಬಸ್ನಲ್ಲಿ ಬರೆಸಿದ್ದಾರೆ.
ದಿಲ್ ರಾಜ್ ಆಳ್ವ ಅವರು ನಗರದ ಸ್ಟೇಟ್ ಬ್ಯಾಂಕ್ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ 'ಶ್ರೀ ಗಣೇಶ್ ಪ್ರಸಾದ್' ಎಂಬ 27 ನಂಬರ್ ಬಸ್ನಲ್ಲಿ ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ. ಬಸ್ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ದಿಲ್ ರಾಜ್ ಆಳ್ವ ಅವರು ತಮ್ಮ ಬಸ್ಗಳಲ್ಲಿ ತುಳುಲಿಪಿ ಕಲಿಕೆ, ನೀರಿನ ಉಳಿತಾಯ, ಸ್ವಚ್ಛ ಭಾರತದ ಬಗ್ಗೆಯೂ ಜಾಗೃತಿ ಬರಹಗಳನ್ನು ಬರೆಸಿದ್ದರು.
ಈ ಬಗ್ಗೆ ಬಸ್ ಮಾಲೀಕ ದಿಲ್ ರಾಜ್ ಆಳ್ವ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ ಜಾಗೃತಿ ಮೂಡಿಸುವ ಬರಹಗಳನ್ನು ನಮ್ಮ ಬಸ್ಗಳಲ್ಲಿ ಬರೆಸುತ್ತಿದ್ದೇನೆ. ಪ್ರಸ್ತುತ ಯುವ ಜನತೆ ಡ್ರಗ್ಸ್ಗಳಿಗೆ ಬಲಿ ಬೀಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ದನಿ ಎತ್ತಬೇಕು ಎಂಬ ದೃಷ್ಟಿಯಿಂದ ಡ್ರಗ್ಸ್ ಜಾಗೃತಿ ಬರಹಗಳನ್ನು ಬಸ್ನಲ್ಲಿ ಬರೆಸಲಾಗಿದೆ. ಈ ಜಾಗೃತಿ ಬರಹ ಸರ್ಕಾರದ ಮಟ್ಟಕ್ಕೂ ತಲುಪಬೇಕೆನ್ನುವ ಎಂಬ ಚಿಂತನೆಯಿದ್ದು, ಈ ಮೂಲಕ ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮಗಳು ಜಾರಿಯಾಗಬೇಕು. ಆಗ ಮಾತ್ರ ಯುವ ಜನತೆ ಈ ಕಡೆ ವಾಲುವಂತದ್ದು ಕಡಿಮೆಯಾಗುತ್ತದೆ ಎಂದು ಹೇಳಿದರು.