ಮಂಗಳೂರು: ಮಂಗಳೂರಿನಲ್ಲಿ ನಡೆದ ವೈದ್ಯರ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಹಿರಿಯ ವೈದ್ಯರೊಬ್ಬರು ಮತ್ತು ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಫಾರೆನ್ಸಿಕ್ ಎಕ್ಸ್ಪರ್ಟ್ ವೈದ್ಯ ಡಾ ಮಹಾಬಲೇಶ್ ಮತ್ತು ಹಿರಿಯ ವಕೀಲ ಮನೋರಾಜ್ ಅವರು ಪೊಲೀಸರ ಕ್ರಮದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಪೊಲೀಸರು, ವೈದ್ಯರುಗಳು ಮತ್ತು ವೈದ್ಯಕಿಯ ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ ಎಂಬುದು ಅವರ ಆರೋಪ.
ಈ ಕುರಿತು ಡಾ. ಮಹಾಬಲೇಶ್ ಅವರು ಮಾತನಾಡಿ, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಗಾಂಜಾ ಪೆಡ್ಲರ್ ಎಂದು ಆರೋಪಿಸಿ ಬಂಧನ ಮಾಡಲಾಗಿದೆ. ಗಾಂಜಾ ಸೇವನೆ ಬಗ್ಗೆಯೂ ಸ್ಕ್ರೀನಿಂಗ್ ಮಾಡಿ ಆರೋಪ ಹೊರಿಸಲಾಗಿದೆ. ಸ್ಕ್ರೀನಿಂಗ್ ಮಾಡಿದರೆ ತಪ್ಪಾಗಿ ಪಾಸಿಟಿವ್ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಎಫ್ಎಸ್ಎಲ್ ರಿಪೋರ್ಟ್ ಮಾಡಬೇಕು. ಅದನ್ನು ಮಾಡದೆ ಅವಸರವಸರಾಗಿ ಬಂಧಿಸಿ ಅವರ ಹೆಸರು ಮತ್ತು ಊರನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿದರು.
ಮೂರು ಮಂದಿಯ ರಿಪೋರ್ಟ್ ನೆಗೆಟಿವ್: ಇದರಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ನಾನು ಡ್ರಗ್ ವಿರುದ್ಧ ಸಾಕಷ್ಟು ಜಾಗೃತಿ ಕಾರ್ಯಕ್ರಮ ಮಾಡಿದ್ದೇನೆ. ನಾಲ್ಕು ಸಾವಿರ ಕೇಸ್ ರಿಪೋರ್ಟ್ ಮಾಡಿದ್ದೇನೆ. ಈ ಕಾರಣದಿಂದ ಬಂಧನಕ್ಕೊಳಗಾದವರನ್ನು ಜೈಲಿಗೆ ಹೋಗಿ ಭೇಟಿಯಾಗಿದ್ದೇನೆ. ಅವರು ಗಾಂಜಾ ಸೇವನೆ ಮಾಡಿದ್ದು ಮಾತ್ರ. ಅವರು ಪೆಡ್ಲರ್ ಅಲ್ಲ. ಅದರಲ್ಲಿ ಮೂರು ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಪೆಡ್ಲರ್ ಬಗ್ಗೆ ನಮಗೆ ಸಿಂಪಥಿ ಇಲ್ಲ. ಇವರು ಕೇವಲ ಸೇವನೆ ಮಾಡಿದವರು. ಇದೊಂದು ಬ್ರೈನ್ ಡಿಸಿಸ್. ಇವರು ಸಮಾಜದ ಸಂತ್ರಸ್ತರು. ಡ್ರಗ್ ಸಿಗುತ್ತಿರುವುದರಿಂದ ಸೇವನೆ ಮಾಡಿದ್ದಾರೆ. ಅವರನ್ನು ಪೆಡ್ಲರ್ ಎಂದು ಬಿಂಬಿಸಿರುವುದು ತಪ್ಪು ಎಂದು ಹೇಳಿದರು.
ಮಂಗಳೂರು ಹೆಸರು ಹಾಳಾಗಿದೆ: ಇನ್ನು, ವಕೀಲ ಮನೋರಾಜ್ ಅವರು ಮಾತನಾಡಿ, ವೈದ್ಯರ ಗಾಂಜಾ ಪ್ರಕರಣದಲ್ಲಿ ಕೆಲವೊಂದು ಪ್ರೊಸಿಜರ್ ಲ್ಯಾಪ್ಸ್ ಆಗಿದೆ. ಅಡಿಕ್ಟ್ ಆದವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕಿತ್ತು. ಅವರನ್ನು ಕಸ್ಟಡಿಗೆ ಕಳುಹಿಸಿರುವುದು ತಪ್ಪಾಗಿದೆ. ಈ ಬಗ್ಗೆ ಹೈಕೋರ್ಟ್ಗೆ ರಿಟ್ ಹಾಕಲು ರೆಡಿ ಮಾಡುತ್ತಿದ್ದೇವೆ. ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ಈ ಬಗ್ಗೆ ತನಿಖೆ ನಡೆಯಲಿ. ಅಥವಾ ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಪೆಡ್ಲರ್ ಎಂದು ಹೇಳಿ ಗಾಂಜಾ ವಶಕ್ಕೆ ಪಡೆಯದೆ ಜೈಲಿನೊಳಗೆ ಕೂರಿಸಿದ್ದಾರೆ. ಇದರಿಂದ ಮಂಗಳೂರು ಹೆಸರು ಹಾಳಾಗಿದೆ. ಚಾರ್ಜ್ ಶೀಟ್ ಹಾಕುವಾಗ ತೆಗೆಯಲಾಗುವುದೆಂದು ಹೇಳುತ್ತಾರೆ. ಅವರ ಪ್ಯಾಮಿಲಿಗೆ ಡ್ಯಾಮೇಜ್ ಆಯಿತು. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕಿತ್ತು ಎನ್ನುತ್ತಾರೆ.
ಘಟನೆ ಏನು? : ಜನವರಿ 7 ರಂದು ಬಿಡಿಎಸ್ ವಿದ್ಯಾರ್ಥಿ ಯುಕೆಯ ನೀಲ್ ಕಿಶೋರ್ ಲಾಲ್ ರಾಮ್ಜಿ (38) ಎಂಬಾತನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಆತನಿಂದ ಎರಡು ಕೆ ಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ಮತ್ತು ಪೆಡ್ಲರ್ ಆಗಿ ಇರುವುದು ತಿಳಿದುಬಂದಿತ್ತು. ಈತನಿಂದ ಸಿಕ್ಕ ಮಾಹಿತಿಯಂತೆ ಸಿಸಿಬಿ ಪೊಲೀಸರು ಈವರೆಗೆ ಒಟ್ಟು 24 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ವೈದ್ಯರುಗಳು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇತರರು ಸೇರಿದ್ದಾರೆ.
ಈ ಪ್ರಕರಣದ ಬಳಿಕ ಕೆಎಂಸಿ ಆಸ್ಪತ್ರೆಯು ಇಬ್ಬರು ವೈದ್ಯರನ್ನು ಮತ್ತು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಿತ್ತು. ಈ ಪ್ರಕರಣದಲ್ಲಿ ಬಂಧಿತರು ಗಾಂಜಾ ಸೇವನೆ ಜೊತೆಗೆ ಪೆಡ್ಲರ್ ಕೂಡ ಆಗಿದ್ದರು ಎಂದು ಪೊಲೀಸರು ಹೇಳಿದ್ದರು. ಆದರೆ, ಪ್ರಕರಣದಲ್ಲಿ ಬಂಧಿತರು ಪೆಡ್ಲರ್ ಅಲ್ಲ, ಗಾಂಜಾ ಸೇವನೆ ಮಾಡಿದವರು ಮಾತ್ರ. ಅವರನ್ನು ಪುನರ್ವಸತಿ ಕೆಂದ್ರಕ್ಕೆ ಕಳುಹಿಸಬೇಕಿತ್ತು. ಬಂಧನ ಮಾಡಿದ್ದು ಸರಿಯಲ್ಲ ಎಂಬುದು ವೈದ್ಯರ ಮತ್ತು ವಕೀಲರ ವಾದವಾಗಿದೆ.
ಓದಿ : ಗಾಂಜಾ ಪ್ರಕರಣ: ಮತ್ತೆ ಇಬ್ಬರು ವೈದ್ಯರು ಸೇರಿದಂತೆ 9 ಮಂದಿ ಬಂಧನ.. ಬಂಧಿತರ ಸಂಖ್ಯೆ 24 ಕ್ಕೆ ಏರಿಕೆ!