ಮಂಗಳೂರು : ಮುಂಬರುವ ಚುನಾವಣೆಯ ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆಯವರನ್ನು ಘೋಷಣೆ ಮಾಡಬೇಕೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷರಿಗೆ, 2023ರಲ್ಲಿ ಮತ್ತೆ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯವಾಡಿದರು.
ದಲಿತ ಸಮುದಾಯದವರಾದ ಖರ್ಗೆಯವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಕಾಂಗ್ರೆಸ್ ಧಮ್ ಇದ್ರೆ ತಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ ಎಂದರು.
ದಲಿತರು ಎನ್ನುವ ಕಾರಣದಿಂದ ಖರ್ಗೆಯವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದವರಿಗೂ ಸಿಎಂ ಸ್ಥಾನದ ಅವಕಾಶ ನೀಡಿದೆ. ಆದರೆ, ಬಿಜೆಪಿಯಲ್ಲಿ ನಾಲ್ಕು ಸಲ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿದ್ದಾರೆ.
ಓದಿ : ಯಾವುದೇ ಬಣ ರಾಜಕೀಯವಿಲ್ಲ, ನಾವೆಲ್ಲ ಒಂದೇ ಬಣ: ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ರವಾನಿಸಿದ ಸಿದ್ದು-ಡಿಕೆಶಿ
ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರು ಒಂದೊಂದು ಸಲ ಸಿಎಂ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಬಿಜೆಪಿಯವರು ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ ಮಾತ್ರ ಸಿಎಂ ಸ್ಥಾನ ನೀಡಿದ್ದಾರೆ. ಒಂದು ಬಾರಿಯೂ ದಲಿತ ಸಮುದಾಯದವರಿಗೆ ಅವಕಾಶ ನೀಡಿಲ್ಲ. ಆದ್ದರಿಂದ ಅವರಿಗೆ ಖರ್ಗೆಯವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಎಂದು ಹೇಳಲು ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರು ನಂಬಿಕೆ ದ್ರೋಹ ಎಸಗಿದ್ದಾರೆಂದು ನಳಿನ್ ಕುಮಾರ್ ಹೇಳಿದ್ದಾರೆ. ನಿಜವಾಗಿಯೂ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೆ ಬಿಜೆಪಿಗರು ನಂಬಿಕೆ ದ್ರೋಹ ಎಸಗಿದ್ದಾರೆ. ಬಿಜೆಪಿ ಸುಳ್ಳು ಪ್ರಚಾರ ಮಾಡಿ, ಜನರ ಮೇಲೆ ತೆರಿಗೆಗಳನ್ನು ಹೇರಿ, ಬೆಲೆ ಏರಿಕೆಗೆ ಕಾರಣವಾಗಿದೆ.
ನಳಿನ್ ಕುಮಾರ್ ಅವರು ಈ ಹಿಂದೆ ಎತ್ತಿನಹೊಳೆಯ ವಿರುದ್ಧವಾಗಿ ಮಾತನಾಡಿದವರು. ಈಗ ಪಶ್ಚಿಮವಾಹಿನಿ, ಎತ್ತಿನಹೊಳೆಗಳ ಪರವಾಗಿ ಕೋಲಾರ, ದೊಡ್ಡಬಳ್ಳಾಪುರ ಮತ್ತಿತರ ಕಡೆಗಳಲ್ಲಿ ಮಾತನಾಡುತ್ತಿದ್ದಾರೆ. ಅವರು ಎತ್ತಿನಹೊಳೆ ಪರವೋ, ವಿರುದ್ಧವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ರಸ್ತೆಗಳು ಹದಗೆಟ್ಟಿವೆ. ಪಂಪ್ವೆಲ್ ಫ್ಲೈಓವರ್, ಪಡೀಲ್ ರೈಲ್ವೆ ಬ್ರಿಡ್ಜ್ ಅಡಿಭಾಗಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕುಲಶೇಖರದಲ್ಲಿ ತಡೆಗೋಡೆ ಕುಸಿದು ರೈಲು ಹಳಿಯ ಮೇಲೆ ಬಿದ್ದಿದೆ. ನಳಿನ್ ಕುಮಾರ್ ಅವರು ಈ ಬಗ್ಗೆ ಮಾತನಾಡಲಿ. ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.