ಮಂಗಳೂರು: ಕೇರಳ ರಾಜ್ಯದ ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾದ್ ವರ್ಕಾಡಿ ಕರ್ನಾಟಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಈ ಘಟನೆ ನಡೆದಿದೆ. ಇದು ಕೇರಳದ ಕಾಸರಗೋಡು ಮತ್ತು ಕರ್ನಾಟಕದ ದಕ್ಷಿಣ ಕನ್ನಡದ ಗಡಿ ಪ್ರದೇಶವಾಗಿದೆ.
ಹರ್ಷಾದ್ ವರ್ಕಾಡಿ ಕಾರಿನಲ್ಲಿ ಬರುತ್ತಿದ್ದಾಗ ಕೊಣಾಜೆ ಪೊಲೀಸರು ಕಾರನ್ನು ತಡೆದು ದಾಖಲೆ ಕೇಳಿದ್ದಾರೆ. ಆದರೆ ತಾನು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಎಂದು ಹೇಳಿ ಪೊಲೀಸರೊಂದಿಗೆ ಚರ್ಚಿಸಿ ದಾಖಲೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹರ್ಷಾದ್, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಲ್ಲದೆ ನನ್ನ ಕಾರನ್ನು ಚೆಕ್ ಮಾಡಲು ನೀವ್ಯಾರು?. ಇದು ಕೇರಳ ಪ್ರದೇಶ. ನಿಮಗೆ ವಾಹನ ಚೆಕ್ ಮಾಡಲು ಹಕ್ಕು ಇಲ್ಲವೆಂದು ಹೇಳಿದ್ದಾರೆ ಎನ್ನಲಾಗಿದೆ.
ಪೊಲೀಸರು ನಾವು ಯಾರ ವಾಹನವನ್ನು ಬೇಕಾದ್ರೂ ಚೆಕ್ ಮಾಡ್ತೀವಿ, ಪ್ರಧಾನಮಂತ್ರಿ ವಾಹನ ಕೂಡ ಚೆಕ್ ಮಾಡಬಹುದು. ನೀವು ಕರ್ನಾಟಕದಿಂದ ಈ ರಸ್ತೆ ಮೂಲಕ ಬಂದ ಕಾರಣ ಚೆಕ್ ಮಾಡ್ತೀವಿ. ಹೋಗಲು ಬಿಡಲ್ಲ ಅಂತ ಪಟ್ಟು ಹಿಡಿದಿದ್ದರು. ಆದರೆ ಕರ್ನಾಟಕ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹರ್ಷಾದ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.