ಮಂಗಳೂರು: ಮಂಗಳೂರಿನ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಜೈಲು ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣವಾಗಲಿದೆ ಎಂದು ಬಂಧಿಖಾನೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಜೈಲು ಕಾಮಗಾರಿ ವೀಕ್ಷಣೆಗೆ ಬಂದಿದ್ದ ವೇಳೆ ಮಾತನಾಡುತ್ತಾ, 100 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ಸೆನ್ಸಾರ್ ಜೈಲ್ ನಿರ್ಮಾಣವಾಗುತ್ತಿದೆ. ಇದರಲ್ಲಿ 1,000 ಖೈದಿಗಳು ಉಳಿದುಕೊಳ್ಳಲು ವ್ಯವಸ್ಥೆಯಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈಗ ವಿಚಾರಣಾಧೀನ ಖೈದಿಗಳನ್ನು ಮಾತ್ರ ಮಂಗಳೂರು ನಗರದಲ್ಲಿರುವ ಜೈಲಿನಲ್ಲಿರಿಸಿ ಶಿಕ್ಷೆ ಪ್ರಕಟವಾದ ಖೈದಿಗಳನ್ನು ಶಿವಮೊಗ್ಗ ಜೈಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ನೂತನ ಜೈಲು ನಿರ್ಮಾಣದ ಬಳಿಕ ಶಿಕ್ಷೆ ಪ್ರಕಟವಾದ ಖೈದಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮಂಗಳೂರು ಜೈಲಿನ ಖೈದಿಗಳಲ್ಲಿ ಮೊಬೈಲ್, ಗಾಂಜಾ ಪತ್ತೆಯಾಗಿತ್ತು. ಆದರೆ ಈಗಿನ ಜೈಲಾಧಿಕಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಯಾವುದೇ ದೂರುಗಳು ಬಂದಿಲ್ಲ ಎಂದರು.
ಜೈಲಿನಲ್ಲಿ ಖೈದಿಗಳ ಗ್ರೂಪಿಸಂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ನಿಯಂತ್ರಿಸಲಾಗಿದೆ. ಗ್ರೂಪಿಸಂ ಮಾಡುವವರನ್ನು ಬೇರೆ ಜೈಲಿಗೆ ವರ್ಗಾಯಿಸಲಾಗುತ್ತಿದೆ. ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೊರೊನಾ ಹಿನ್ನೆಲೆಯಲ್ಲಿ ಖೈದಿಗಳ ಸಂದರ್ಶನಕ್ಕೆ ಕುಟುಂಬದವರಿಗೆ ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆಯನ್ನು ಡಿಸೆಂಬರ್‌ನಿಂದ ಮಾಡಲಾಗಿದೆ. ಬೆಂಗಳೂರು ಜೈಲಿನಲ್ಲಿ ರೂಂ ಪಡೆಯಲು ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಧ್ಯಮವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದ್ದು, ಎಲ್ಲಾ ಜೈಲಿನಲ್ಲಿ ಸಿಬ್ಬಂದಿಗಳನ್ನು ರೊಟೇಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.