ಮಂಗಳೂರು: ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್ 28 ರಿಂದ ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದೆ.
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರೆಗೂ ರಾಜಿಯಿಲ್ಲದೇ ಮುಂದುವರಿಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 28 ರಿಂದ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ದಿಷ್ಟಾವಧಿ ಧರಣಿ ನಡೆಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಟೋಲ್ ಗೇಟ್ ಮುತ್ತಿಗೆ ಹೋರಾಟದಲ್ಲಿ ಭಾಗವಹಿಸಿ, ಒಕ್ಕೊರಲಿನಿಂದ ಆಗ್ರಹಿಸಿದರೂ ಬಿಜೆಪಿ ಸರ್ಕಾರ ಟೋಲ್ ಸಂಗ್ರಹ ಸ್ಥಗಿತಗೊಳಿಸದೇ ಭಂಡತನ ಪ್ರದರ್ಶಿಸಿದೆ. ಪೊಲೀಸ್ ಬಲವನ್ನು ಪ್ರಯೋಗಿಸಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು ಚದುರಿಸಿದೆ. ಇದು ಬಿಜೆಪಿ ಸರ್ಕಾರ ಹಾಗೂ ಸಂಸದರ, ಶಾಸಕರುಗಳ ಜನ ವಿರೋಧಿತನವನ್ನ ಎತ್ತಿ ತೋರಿಸಿದೆ ಎಂದು ಸಮಿತಿ ಆರೋಪಿಸಿದೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಧರಣಿ.. ತಿಂಗಳೊಳಗೆ ತೆರವಿನ ಭರವಸೆ
ಮುತ್ತಿಗೆ, ಪ್ರತಿಭಟನೆಗೆ ವ್ಯಾಪಕ ಜನ ಬೆಂಬಲವನ್ನು ಕಂಡು ಕಂಗೆಟ್ಟು ಹದಿನೈದು, ಇಪ್ಪತ್ತು ದಿನ ಟೋಲ್ ಗೇಟ್ ಮುಚ್ಚಲು ಸಮಯ ನೀಡಬೇಕು ಎಂದು ಸಾರ್ವಜನಿಕವಾಗಿ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೋರಾಟ ಸಮಿತಿ ಅವರಲ್ಲಿ ಮನವಿ ಮಾಡಿದ್ದರು.
ಟೋಲ್ ತೆರವಿಗೆ ಸಂಬಂಧಿಸಿದಂತೆ ಹಲವು ಇದೇ ರೀತಿಯ ಭರವಸೆಗಳನ್ನು ಈ ಹಿಂದೆ ನೀಡಿ ಈಡೇರಿಸದೇ ಇರುವುದರಿಂದ ಜನತೆ ಇವರ ಮಾತುಗಳ ಮೇಲಿನ ನಂಬಿಕೆಯನ್ನು ಪೂರ್ತಿ ಕಳೆದುಕೊಂಡಿದ್ದಾರೆ. ಈಗಲೂ ಇವರ ಭರವಸೆಗಳನ್ನು ನಂಬಿ ಹೋರಾಟ ಸ್ಥಗಿತಗೊಳಿಸಿದರೆ ಸುರತ್ಕಲ್ ಟೋಲ್ ಸುಲಿಗೆ ಶಾಶ್ವತಗೊಳ್ಳಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲಾಡಳಿತ, ಸಂಸದರ ಕಾಲಮಿತಿ ನವೆಂಬರ್ 7ಕ್ಕೆ ಅಂತ್ಯಗೊಳ್ಳುತ್ತದೆ. ಅದಕ್ಕೆ ಹತ್ತು ದಿನ ಮುಂಚಿತವಾಗಿ ಅಕ್ಟೋಬರ್ 28ಕ್ಕೆ ಅನಿರ್ಧಿಷ್ಟ ಧರಣಿ ಆರಂಭಿಸುವುದು. ಆ ಮೂಲಕ ಸಾರ್ವಜನಿಕವಾಗಿ ವಿನಂತಿಸಿದಂತೆ ನವೆಂಬರ್ 7ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಜನಾಭಿಪ್ರಾಯ ಕ್ರೋಢೀಕರಿಸುವ, ಒತ್ತಡವನ್ನು ಸೃಷ್ಟಿಸುವ ಪ್ರಯತ್ನವನ್ನು ಅನಿರ್ಧಿಷ್ಟಾವಧಿ ಧರಣಿಯ ಮೂಲಕ ಮಾಡುವುದು. ಒಟ್ಟು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹೋರಾಟವನ್ನು ಮುಂದುವರಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕೇಂದ್ರಕ್ಕೆ ಮುತ್ತಿಗೆ.. ಹಲವು ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸಹ ಸಂಚಾಲಕ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ವಹಿಸಿದ್ದರು. ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ಮುಖಂಡರಾದ ಎಂ ದೇವದಾಸ್, ರಘು ಎಕ್ಕಾರು, ಸಾಮಾಜಿಕ ಮುಖಂಡರಾದ ಎಂ ಜಿ ಹೆಗ್ಡೆ, ವೈ ರಾಘವೇಂದ್ರ ರಾವ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ವಿವಿಧ ಸಂಘಟನೆಗಳ ಪ್ರಮುಖರಾದ ಕಿಶನ್ ಕುಮಾರ್ ಕೊಲ್ಕೆಬೈಲು, ವಸಂತ ಬರ್ನಾಡ್, ರಾಜೇಶ್ ಪೂಜಾರಿ ಕುಳಾಯಿ, ದಿನೇಶ್ ಕುಂಪಲ, ಹರೀಶ್ ಪೇಜಾವರ, ಶೇಖರ ಹೆಜಮಾಡಿ, ರಮೇಶ್ ಟಿ ಎನ್, ಶ್ರೀಕಾಂತ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು.