ಮಂಗಳೂರು : ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಆರಂಭವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಡಾ.ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಚಿಸಿ ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಸಮಿತಿಯಲ್ಲಿ ಡಾ.ಕೇಶವ ಬಂಗೇರಾ, ಡಾ.ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿರಾಜ್ ಕವತ್ತಾರು ಮಣಿಪಾಲ, ವಸಂತ್ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸಮಿತಿ : ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಹಲವು ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ರಾಜ್ಯ ಸರಕಾರಕ್ಕೆ ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಇರುವ ನಿಯಮಗಳು ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಈ ಕುರಿತು ಸಾಧಕ - ಬಾಧಕಗಳ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಿ ವಾಸ್ತವಾಂಶದ ವರದಿಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರಕಾರ ನಿರ್ದೇಶನ ಮಾಡಿತ್ತು.
ಅದರಂತೆ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಒಂದು ವಾರದಲ್ಲಿ ವರದಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಆದೇಶಿಸಿದ್ದಾರೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಟ್ವೀಟ್ ಕೂಡಾ ಮಾಡಿದ್ದಾರೆ.
ತುಳು ಭಾಷೆಯನ್ನು ಕರ್ನಾಟಕ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ಕಳೆದ ಕೆಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆದಿತ್ತು. ಅಷ್ಟೇ ಅಲ್ಲದೆ ಕರಾವಳಿಯ ರಾಜಕೀಯ ನಾಯಕರು ತುಳುಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಬಗ್ಗೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ.
ಈ ಹಿಂದೆ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಹಾಗೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ನೇತೃತ್ವದ ನಿಯೋಗ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದರು.
ತುಳು ಭಾಷೆಯ ಇತಿಹಾಸ : ತುಳು ಭಾಷೆಯು ದ್ರಾವಿಡ ಭಾಷೆಯಾಗಿದ್ದು, ಇದನ್ನು ಮುಖ್ಯವಾಗಿ ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. 2011ರ ಜನಗಣತಿಯ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 18,46,427 ಮಂದಿ ತುಳು ಮಾತನಾಡುವವರಿದ್ದರು. ಕೆಲವು ವಿದ್ವಾಂಸರು ತುಳು ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸ ಇದೆ ಎಂದು ಹೇಳುತ್ತಾರೆ.ಆರಂಭಿಕ ದ್ರಾವಿಡ ಭಾಷೆಗಳಲ್ಲಿ ಇದು ಒಂದು ಎಂದು ಹೇಳಲಾಗುತ್ತದೆ.
ತುಳು ಭಾಷಿಕರು ಮುಖ್ಯವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಈ ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡುವಂತೆ ಹಾಗೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರಗಳಿಗೆ ಒತ್ತಾಯಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ : ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಆಗ್ರಹ; ಮಂಗಳೂರಿನ ಬೈಕರ್ಸ್ ವಿಭಿನ್ನ ಪ್ರಯತ್ನ!