ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ 150ನೇ ವರ್ಷಾಚರಣೆಯಲ್ಲಿ ಭಾಗವಹಿಸುವಂತೆ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಕರೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. 27 ಸೆಕೆಂಡಿನ ಈ ವಿಡಿಯೋದಲ್ಲಿ ಕೆ.ಎಲ್. ರಾಹುಲ್ ತುಳು ಹಾಗೂ ಕನ್ನಡದಲ್ಲಿ ಮಾತನಾಡಿದ್ದಾರೆ.
ಫೆ.6 ರಂದು ಮಂಗಳೂರು ವಿವಿಯಲ್ಲಿ 150ನೇ ವರ್ಷಾಚರಣೆ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಡಿಯೋ ಮಾಡಿಕೊಡುವಂತೆ ಮಂಗಳೂರು ವಿವಿಯಲ್ಲಿ ಇತಿಹಾಸ ಪ್ರೊಫೆಸರ್ ಆಗಿರುವ ರಾಹುಲ್ ತಾಯಿ ಪ್ರೊ.ರಾಜೇಶ್ವರಿಯವರಲ್ಲಿ ಕಾಲೇಜಿನವರು ಕೇಳಿಕೊಂಡಿದ್ದರಂತೆ. ಹೀಗಾಗಿ ರಾಹುಲ್ ತಾಯಿ ಪ್ರೊ. ರಾಜೇಶ್ವರಿಯವರು ಮಗನಿಂದ ಈ ವಿಡಿಯೋ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಮೊದಲಿಗೆ 'ಪೂರೆರೆಗ್ಲಾ ನಮಸ್ಕಾರ, ಯಾನ್ ನಿಕ್ಲೆನ ಕೆ.ಎಲ್.ರಾಹುಲ್ (ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಕೆ.ಎಲ್.ರಾಹುಲ್) ಎಂದು ತುಳುವಿನಲ್ಲಿ ಮಾತನಾಡಿರುವ ಕೆ.ಎಲ್.ರಾಹುಲ್ ಬಳಿಕ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷದ ಸಂಭ್ರಮಾಚರಣೆ ಫೆಬ್ರವರಿ 6ರಂದು ನಡೆಯಲಿದೆ. ನೀವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹೇಳಿದ್ದಾರೆ.