ಮಂಗಳೂರು: ನೆರೆಹಾವಳಿ ಪ್ರದೇಶಗಳಿಗೆ ಅನುಕೂಲ ಮಾಡಲು ಕೇಂದ್ರ ಸರಕಾರ ನೆನ್ನೆ 1,200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಪೂರ್ಣ ಪ್ರಮಾಣದ ಹಣ ಆದಷ್ಟು ಬೇಗ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಾಣದ ನೆರೆ ಹಾವಳಿ ನಮ್ಮನ್ನು ಪೀಡಿಸಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರವಾಹದಿಂದಾದ ಹಾನಿಯ ಬಗ್ಗೆ ವರದಿ ಕಳುಹಿಸಿದೆ. ಕೇಂದ್ರದ ತಂಡವೂ ಸಮೀಕ್ಷೆಯನ್ನು ಮಾಡಿದೆ. ಕೇಂದ್ರ ತಂಡದ ಸಮೀಕ್ಷೆ ಹಾಗೂ ರಾಜ್ಯದ ವರದಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯದ ಅಧಿಕಾರಿಗಳು ಈ ವರದಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೆರೆ ಹಾವಳಿಗೆ ತುತ್ತಾದ ರೈತರ ನೆರವಿಗೆ ಒಟ್ಟಿಗೆ ಧಾವಿಸುತ್ತದೆ. ಅವರಿಗೆ ಮನೆಗಳನ್ನು ಕಟ್ಟಿಕೊಡಲು ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಭಾಗಶಃ ಹಾನಿಗೊಂಡವರಿಗೆ ಒಂದು ಲಕ್ಷ ರೂ. ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಬೆಳೆಗಳ ಹಾನಿಗಳಿಗೂ ಪರಿಹಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಕೊಡುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ರಾಜ್ಯದ ಹಾಗೂ ಕೇಂದ್ರದ ವರದಿ ತಾಳೆಯಾದಲ್ಲಿ ಪೂರ್ಣ ಪ್ರಮಾಣದ ನೆರೆ ಪರಿಹಾರ ರಾಜ್ಯಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಕೇಂದ್ರ ಸರ್ಕಾರವು ಎಲ್ಲಾ ಹಣವನ್ನು ಧೀರ್ಘಕಾಲದ ಯೋಜನೆಗೆ ಉಪಯೋಗಿಸುತ್ತಿದೆ. ಮನೆ ನಿರ್ಮಾಣ, ಸೇತುವೆ ನಿರ್ಮಾಣ, ಬೆಳೆ ನಾಶ ಇತ್ಯಾದಿಗೆ ನೀಡಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಇದು ಪೂರ್ಣಗೊಂಡರೆ ಖಂಡಿತಾ ಜನರಲ್ಲಿ ವಿಶ್ವಾಸ ಮೂಡುತ್ತದೆ. ಅಲ್ಲದೆ ಎಲ್ಲರ ನೆರವಿಗೆ ನಮಗೆ ಧಾವಿಸಲೂ ಶಕ್ತಿ ಬರುತ್ತದೆ. ಖಂಡಿತಾ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.