ಮಂಗಳೂರು: ಎರಡು ದಿನಗಳ ಕರಾವಳಿ ಜಿಲ್ಲೆಯ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇರಳ ಗಡಿಗೆ ಭೇಟಿ ನೀಡುವ ಕಾರ್ಯಕ್ರಮ ರದ್ದುಗೊಳಿಸಲು ಕೇರಳಿಗರ ಪ್ರತಿಭಟನೆ ಕಾರಣ ಎಂದು ಹೇಳಲಾಗುತ್ತಿದೆ.
ನಿನ್ನೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಕೇರಳ ಗಡಿ ಭಾಗವಾದ ತಲಪಾಡಿ ಚೆಕ್ಪೋಸ್ಟ್ಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು.
ಕಳೆದ ಕೆಲವು ದಿನಗಳಿಂದ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ ಆರ್ಟಿಪಿಸಿಆರ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿತ್ತು. ಈ ಕಾರಣದಿಂದ ಕೇರಳಿಗರು ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಅವರ ಪರಿಶೀಲನೆ ವೇಳೆಯಲ್ಲಿಯೂ ತಲಪಾಡಿ ಗಡಿಯ ಕೇರಳ ರಾಜ್ಯಕ್ಕೆ ಸೇರಿದ ಜಾಗದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಮುಖ್ಯಮಂತ್ರಿ ಬರುವ ವೇಳೆಯೂ ಪ್ರತಿಭಟನೆ ನಡೆಯುವ ಸೂಚನೆ ಇದ್ದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕೇರಳ ಗಡಿ ಭೇಟಿಯನ್ನು ಸಿಎಂ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ನಿಗದಿತ ಪ್ರವಾಸದ ಪ್ರಕಾರ ನಿನ್ನೆ ರಾತ್ರಿ ಉಡುಪಿಯಿಂದ ಮಂಗಳೂರಿಗೆ ಬಂದು ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಕೇರಳ ಗಡಿ ಭೇಟಿ ನೀಡುವ ಕಾರ್ಯಕ್ರಮವಿತ್ತು. ರಾತ್ರಿ ಕೇರಳ ಗಡಿ ಭೇಟಿ ರದ್ದು ಮಾಡಲು ನಿರ್ಧರಿಸಿದ ಸಿಎಂ ಉಡುಪಿಯಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ಮಂಗಳೂರಿಗೆ ಬಂದು ಬೆಂಗಳೂರಿಗೆ ತೆರಳಿದ್ದಾರೆ.
ಸಿಎಂ ಭೇಟಿ ರದ್ದತಿಯ ನಡುವೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಯುಡಿವೈಎಫ್ ಸಮಿತಿಯ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಲಾಗಿದೆ.
ಓದಿ: ಸಿ ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ