ಬೆಳ್ತಂಗಡಿ (ದಕ್ಷಿಣ ಕನ್ನಡ): ಯುವತಿಯೊಬ್ಬಳೊಂದಿಗೆ ಬಸ್ನಲ್ಲಿ ಮಾತನಾಡಿದ ಕಾರಣಕ್ಕೆ ಯುವಕನನ್ನು ತಂಡವೊಂದು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಉಜಿರೆಯಲ್ಲಿ ಮಂಗಳವಾರ ಸಂಭವಿಸಿದೆ. ಕಕ್ಕಿಂಜೆಯ 22 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಗೆ ಬಸ್ಸಿನಲ್ಲಿ ಹಿಂದಿರುಗುವ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಬಳಿಕ ಯುವತಿ ಬೆಳ್ತಂಗಡಿಯಲ್ಲಿ ಇಳಿದಿದ್ದಾಳೆ. ಬಸ್ನಲ್ಲಿ ಇವರನ್ನು ಗಮನಿಸಿದ ಪ್ರಯಾಣಿಕನೊಬ್ಬ ಉಜಿರೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ. ಯುವಕನಿಗಾಗಿ ಉಜಿರೆಯಲ್ಲಿ ಕಾದು ನಿಂತಿದ್ದ ಕೆಲವರು, ಬಸ್ನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಹಲ್ಲಗೊಳಗಾದ ಯುವಕ ನೀಡಿದ ದೂರಿನ ಮೇರೆಗೆ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪಬ್ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಯತ್ನ: ಎರಡು ಗುಂಪುಗಳ ನಡುವೆ ಹೊಡೆದಾಟ
ಪಬ್ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ -ಬೆಂಗಳೂರು: ಕೆಲದಿನಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಪಬ್ ಒಳಗೆ ನುಗ್ಗಿ ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ ಸಂಘಟನೆಯೊಂದರ ಸದಸ್ಯರು ಮತ್ತು ಪಬ್ ಸಿಬ್ಬಂದಿಯ ನಡುವೆ ಮಾರಾಮಾರಿಗೆ ಕಾರಣವಾಗಿತ್ತು. ಅಶೋಕನಗರ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಕರ್ನಾಟಕ ಕಾರ್ಮಿಕರ ಪರಿಷತ್ ಎಂಬ ಸಂಘಟನೆಯ ಸುಮಾರು ಹದಿನೈದು ಸದಸ್ಯರು ಡೋಲು ಬಡಿದುಕೊಂಡು ಬ್ರಿಗೇಡ್ ರಸ್ತೆಯ ಪಬ್ವೊಂದರ ಒಳ ಪ್ರವೇಶಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯರನ್ನು ಬೌನ್ಸರ್ಗಳು ತಡೆದಿದ್ದರು. ನಂತರ ಬೌನ್ಸರ್ಸ್ ಹಾಗೂ ಸಂಘಟನೆಯ ನಡುವೆ ವಾಗ್ವಾದ ಆರಂಭವಾಗಿತ್ತು. ಎರಡೂ ಗುಂಪಿನವರು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಆಶೋಕ ನಗರ ಪೊಲೀಸರು, ಸಂಘಟನೆಯ ಸದಸ್ಯರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ.. ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ
ಯುವಕನಿಗೆ ಥಳಿತ - ಹಿಂದಿನ ಘಟನೆಯೊಂದರಲ್ಲಿ, ಮಂಗಳೂರಿನ ಕಂಕನಾಡಿಯ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಅಲ್ಲದೇ ಬಜರಂಗದಳ ಕಾರ್ಯಕರ್ತರು ಯುವತಿಯ ಪೋಷಕರಿಗೆ ಈ ಮಾಹಿತಿಯನ್ನು ತಿಳಿಸಿದ್ದರು. ಯುವತಿಯ ಪೋಷಕರು ಮತ್ತು ಪೊಲೀಸರೊಂದಿಗೆ ಆಭರಣದ ಮಳಿಗೆ ಒಳಗೆ ಹೋದ ಭಜರಂಗದಳ ಕಾರ್ಯಕರ್ತರು, ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿತ್ತು. ಹಲ್ಲೆಗೊಳಗಾದ ಯುವಕ ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೂರನ್ನು ನೀಡಿದ್ದ. ಯುವತಿ ತಾಯಿ ಪ್ರತಿ ದೂರು ನೀಡಿದ್ದರು. ಜ್ಯುವೆಲ್ಲರಿ ಸಂಸ್ಥೆ ಅತಿಕ್ರಮ ಪ್ರವೇಶದ ದೂರನ್ನು ದಾಖಲಿಸಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ರಾತ್ರಿ ಸುತ್ತಾಡುತ್ತಿದ್ದ ಜೋಡಿ ಮೇಲೆ ಹಲ್ಲೆ ಯತ್ನ