ಮಂಗಳೂರು: ಜಿಲ್ಲೆಯ ನೀರು ಮಾರ್ಗದ ಪಡು ಬಿತ್ತ್‌ಪಾದೆ ಎಂಬಲ್ಲಿ ರಿಕ್ಷಾ ಚಾಲಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನೀರು ಮಾರ್ಗದ ನಿತಿನ್ ಪೂಜಾರಿ, ಧನರಾಜ್, ಶಿವಾನಂದ ಆಚಾರಿ, ಗಣೇಶ್, ಜೀವನ್ ಪೂಜಾರಿ, ಸಂತೋಷ್ ಪೂಜಾರಿ, ಧೀರಜ್ ಸಪಲ್ಯ, ರಾಘವೇಂದ್ರ ಪೂಜಾರಿ, ಪ್ರಾಣೇಶ್ ಪೂಜಾರಿ ಬಂಧಿತ ಆರೋಪಿಗಳು.
ಅ. 17ರಂದು ಸಂಕ್ರಮಣವಾದ ಕಾರಣ ಸಂತೋಷ್ ಎಂಬಾತ ಬಿತ್ತ್‌ಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದ ಸಂದರ್ಭ ಕಪ್ಪು ಬಣ್ಣದ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿ ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದರಿಂದ ಸಂತೋಷನ ಎರಡೂ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಯುವಕ ರಕ್ತದ ಮಡುವಿನಲ್ಲಿ ಕುಸಿದು ಬಿದ್ದದ್ದ. ಗಾಯಗೊಂಡ ರಿಕ್ಷಾ ಚಾಲಕನನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಸಂತೋಷ್, ನಿತಿನ್, ಪ್ರಾಣೇಶ್ ಮೂವರು ಆತ್ಮೀಯರಾಗಿದ್ದು, ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಎರಡು ವರ್ಷದ ಹಿಂದೆ ಸಂತೋಷ್ ಸಂಘಟನೆಯಿಂದ ದೂರ ಸರಿದು ತನ್ನ ಪಾಡಿಗೆ ತಾನಿದ್ದ. ಸಂಘಟನೆ ಬಿಟ್ಟ ಬಳಿಕ ಕೆಲವು ವಿಚಾರಗಳನ್ನು ಸಂತೋಷ್ ವಿರೋಧಿಸುತ್ತಿದ್ದ ಮತ್ತು ಈ ವಿಚಾರದಲ್ಲಿ ನಿತಿನ್ ಮತ್ತು ಸಂತೋಷ್ ಮಧ್ಯೆ ಹಲವು ಸಮಯದಿಂದ ವೈಮನಸ್ಸಿತ್ತು ಎನ್ನಲಾಗಿದೆ.
ಅ. 17ರಂದು ಬೆಳಗ್ಗೆಯೂ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ ಸಂತೋಷ್‌ನ ಮೇಲೆ ದಾಳಿ ನಡೆದಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು, 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.