ಮಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಅವರ ಅಧೀನದಲ್ಲಿರುವ ಆಡಳಿತ ಕದ್ದುಮುಚ್ಚಿ ಹೋಗಿ ರಾತ್ರಿ ದೇವಾಲಯವನ್ನು ಒಡೆಯುವ ಅವಶ್ಯಕತೆ ಇರಲಿಲ್ಲ. ಇದೊಂದು ಟೂಲ್‌ಕಿಟ್ ಷಡ್ಯಂತ್ರದ ಭಾಗವಾಗಿ ಅವರು ವರ್ತಿಸಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸ್ಪಷ್ಟನೆ ನೀಡಲಿ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿರುವಾಗ ಬಹುಸಂಖ್ಯಾತರ ಭಾವನೆಗಳನ್ನು ಧಕ್ಕೆ ಮಾಡುವುದಕ್ಕಾಗಿ ಮಾಡಿರುವ ವ್ಯವಸ್ಥಿತ ಸಂಚಿನ ಭಾಗ ಇದು. ಆದ್ದರಿಂದ, ಸರ್ಕಾರದ ಪರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಸುಪ್ರೀಂಕೋರ್ಟ್ 2009ರ ಬಳಿಕ ನಿರ್ಮಾಣವಾದ ದೇವಸ್ಥಾನಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರೆ ವ್ಯವಸ್ಥೆಗಳನ್ನು ಮಾಡಿ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕೆಂಬ ಸ್ಪಷ್ಟ ಆದೇಶ ಇದೆ. ಎಲ್ಲೂ ದೇವಸ್ಥಾನ ಕೆಡವಲು ಆದೇಶ ನೀಡಿಲ್ಲ. ಸ್ಪಷ್ಟ ದಾಖಲೆಗಳು ಇರುವ ದೇವಾಲಯಗಳನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇದು ಷಡ್ಯಂತರದ ಭಾಗವೇನು ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ, ಈ ಬಗ್ಗೆ ಉತ್ತರ ಕೇಳಿ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಫೇಕ್ ಹಿಂದುತ್ವ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಬಿಜೆಪಿಯ 23-24 ಕಾರ್ಯಕರ್ತರ ಕೊಲೆಯಾದಾಗ ಇವರು ಎಲ್ಲಿದ್ದರು?. ಸಿಎಂ ಆಗಿದ್ದುಕೊಂಡು ಏನು ಮಾಡಿದ್ದರು. ಸಿದ್ದರಾಮಯ್ಯರ ಮೊಸಳೆ ಕಣ್ಣೀರು ನಿಮಗೆ ಅರ್ಥ ಆಗುತ್ತಿಲ್ಲವಾ? ಎಂದು ಪ್ರಶ್ನಿಸಿದ ಅವರು, ರಾಜಕೀಯ ಲಾಭಕ್ಕಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವುದು ಸಿದ್ದರಾಮಯ್ಯರ ಪ್ರವೃತ್ತಿ. ಕಳೆದ 8-10 ವರ್ಷಗಳಲ್ಲಿ ಇಂತಹ ಪ್ರಕರಣಗಳು ನಡೆದಾಗ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಯಾವ ಸಮುದಾಯದ ಪರವಾಗಿದ್ದರು ಅದನ್ನು ಹೇಳಲಿ ಎಂದರು.
ಕೋವಿಡ್ ಸೋಂಕಿನ ಸಂಕಟ ಕೇವಲ ರಾಜ್ಯಕ್ಕೆ, ದೇಶಕ್ಕೆ ಮಾತ್ರ ಬಂದಿರೋದಲ್ಲ. ಆದರೆ, ದೇಶ ಅತ್ಯಂತ ಅದ್ಭುತ ರೀತಿಯಲ್ಲಿ ಇದನ್ನು ನಿರ್ವಹಣೆ ಮಾಡಿದೆ. ನಮ್ಮ ದೇಶದಲ್ಲಿ ಆಗುವಷ್ಟು ದೊಡ್ಡ ಪ್ರಮಾಣದ ಲಸಿಕಾ ಅಭಿಯಾನ ಬೇರೆ ಎಲ್ಲೂ ಆಗುತ್ತಿಲ್ಲ. ಈಗಾಗಲೇ 70-75 ಕೋಟಿಯಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಇದು ಫಾರ್ಮಸಿಯವರ ಲಾಬಿಯೋ ಗೊತ್ತಿಲ್ಲ. ಆದರೆ, ಸೋಂಕನ್ನು ಸರ್ಕಾರ ಉತ್ತಮವಾಗಿ ನಿಭಾಯಿಸುವ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹಂತಹಂತವಾಗಿ ಶಿಕ್ಷಕರ ನೇಮಕಾತಿ: ಸಚಿವ ಮಾಧುಸ್ವಾಮಿ ಭರವಸೆ