ಮಂಗಳೂರು: ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂಬ ವಿಡಿಯೋ ವೈರಲ್ ಆದ ಬಳಿಕ ಫೋನ್ ಕರೆಯೊಂದರಲ್ಲಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
ಮೂಡಬಿದಿರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಾತಿನಿಂದ ಬಿಲ್ಲವ ಸಮುದಾಯಕ್ಕೆ ನೋವಾದ ಹಿನ್ನೆಲೆಯಲ್ಲಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಅವಳಿ ವೀರಪುರುಷರಾದ ಕೋಟಿ ಚೆನ್ನಯ್ಯ ಅವರ ಬಗ್ಗೆ ಭಯಭಕ್ತಿಯಿದ್ದು, ಮೂಲ ಕ್ಷೇತ್ರಕ್ಕೆ ತೆರಳಿ ಕೈಕಾಣಿಕೆ ಹಾಕಿ ಕ್ಷಮೆಯಾಚಿಸುತ್ತೇನೆ.
ನಾನು ಬಿಜೆಪಿಯಲ್ಲಿದ್ದರೂ ಜನಾರ್ದನ ಪೂಜಾರಿ ಅವರ ಅಭಿಮಾನಿ. ಅವರೊಂದಿಗೆ ಕಳೆದ ಮೂರು ದಶಕಗಳಿಂದ ಜೊತೆಗಿದ್ದೇನೆ. ನಿನ್ನೆ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ಪ್ರಕರಣದ ಹಿನ್ನೆಲೆ: ಜಗದೀಶ್ ಅಧಿಕಾರಿ ಅವರು ಧಾರ್ಮಿಕ ಸಭೆಯೊಂದರ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂದು ಹೇಳಿರುವ ವಿಚಾರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಯುವಕನೊಬ್ಬ ಜಗದೀಶ್ ಅಧಿಕಾರಿಯವರಿಗೆ ಕರೆ ಮಾಡಿದಾಗ ಸಂಯಮದಿಂದ ಉತ್ತರಿಸಿದ ಅವರು, ಬಳಿಕ ಕರೆ ಕಡಿತಗೊಂಡಿದೆ ಎಂದು ಭಾವಿಸಿ ಬಿಲ್ಲವ ಸಮುದಾಯ ಮತ್ತು ಕರಾವಳಿ ವೀರಪುರುಷರಾಗಿ ಆರಾಧಿಸುವ ಕೋಟಿ ಚೆನ್ನಯ್ಯ ಬಗ್ಗೆ ಅಪಮಾನಿಸಿ ಮಾತನಾಡಿದ್ದರು. ಈ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಲ್ಲವ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್ ಕ್ಷಮೆಯಾಚಿಸಿದ್ದಾರೆ.