ಮಂಗಳೂರು: ವಿಜಯ ಬ್ಯಾಂಕ್ ಮುಚ್ಚುವಂತಹ ಅನಿವಾರ್ಯತೆ ಎದುರಾಗಿದೆ. ಆರ್ಥಿಕ ವಾದ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಸ್ಥಾನದಲ್ಲಿ ನಾನಿದಿದ್ದದ್ದರೆ ಆ ನಿರ್ಣಯ ಮಾಡಿದ ದಿನವೇ ರಾಜೀನಾಮೆ ಕೊಡುತ್ತಿದ್ದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬಿಜೆಪಿಯವರು ವಿಜಯ ಬ್ಯಾಂಕ್ನ್ನು ಬರೋಡಾ ಬ್ಯಾಂಕ್ನೊಂದಿಗೆ ವಿಲೀನ ಮಾಡುತ್ತಿದ್ದಾರೆ. ವಿಜಯ ಬ್ಯಾಂಕ್ ಇಂದಿನಿಂದ ಮುಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಚ್ಛೇ ದಿನದ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಬರೀ ಆಶ್ವಾಸನೆ ಮೇಲೆ ಕೇಂದ್ರ ಸರ್ಕಾರ ನಡೆಯುತ್ತಿದೆ. ನಿತಿನ್ ಗಡ್ಕರಿಯವರು ಒಂದು ಟಿವಿಯಲ್ಲಿ ಸುಳ್ಳಿನ ಭರವಸೆ ಮೇಲೆ ಈ ಸರ್ಕಾರ ಸ್ಥಾಪನೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಆದ್ದರಿಂದ ಕೇಂದ್ರ ಸರ್ಕಾರ ಸುಳ್ಳಿನ ಭರವಸೆ ಮೇಲೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಇನ್ನೇನು ಹೊಸ ವರ್ಷ ಬರುತ್ತಿರುವ ಹಿನ್ನೆಲೆಯಲ್ಲಿ ಈ ದೇಶದಲ್ಲಿ ಹೊಸ ಸರ್ಕಾರ ರಚನೆಯಾಗಬೇಕೆಂದು ಜನ ಬಯಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮಂಡ್ಯದಲ್ಲಿ ಚಿತ್ರನಟರಾದ ಯಶ್ ಮತ್ತು ದರ್ಶನ ಪ್ರಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ, ಪ್ರಚಾರವನ್ನೂ ಯಾರು ಬೇಕಾದರೂ ಮಾಡಬಹುದು. ಆದ್ರೆ ನಾವು ಮಾಡುವ ಕಾರ್ಯದಿಂದ ಜನರಿಗೆ ಲಾಭವಾಗುವುದು ಮುಖ್ಯ. ನಮ್ಮ ಅಭ್ಯರ್ಥಿಗಳು ಈ ಬಾರಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.