ಮಂಗಳೂರು: ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ ವಾಹನದ ವಾರಸುದಾರರು ಅಲ್ಲೇ ಇದ್ದರೆ ವಾಹನವನ್ನು ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಅಲ್ಲೇ ದಂಡ ವಿಧಿಸಿ ಕಳುಹಿಸಿ. ಅಲ್ಲದೆ ಕೊಂಡೊಯ್ಯುವಾಗ ವಾಹನಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಿ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪೊಲೀಸರಿಗೆ ಸೂಚಿಸಿದರು.
ಟೋಯಿಂಗ್ ವಾಹನದವರು ನೋ ಪಾರ್ಕಿಂಗ್ನಲ್ಲಿರುವ ವಾಹನಗಳನ್ನು ಕೊಂಡೊಯ್ಯುವಾಗ ವಾಹನಗಳಿಗೆ ಹಾನಿ ಮಾಡುತ್ತಾರೆ ಹಾಗೂ ಮುಟ್ಟುಗೋಲು ಹಾಕಿದ ವಾಹನದ ಮೇಲೆಯೇ ಕುಳಿತು ಹೋಗುತ್ತಾರೆ ಎಂದು ಇಂದು ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರು ನೀಡಿದ ದೂರಿಗೆ ಪ್ರತಿಯಾಗಿ ಅವರು ಪ್ರತಿಕ್ರಿಯಿಸಿದರು.
ನಗರದ ಅಶೋಕನಗರ-ಶೇಡಿಗುರಿ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ಗಳನ್ನು ಚಲಾಯಿಸುತ್ತಿದ್ದಾರೆ. ಹಾಗಾಗಿ ಅಶೋಕ ನಗರ ಸರಕಾರಿ ಶಾಲೆಯ ಸಮೀಪ ಹಂಪ್ಸ್ ಅಳವಡಿಸಲು ನಾಗರಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಅಲ್ಲಿಗೆ ಟ್ರಾಫಿಕ್ ಪೊಲೀಸರನ್ನು ಕಳುಹಿಸಿ ಕೇಸ್ ದಾಖಲಿಸಲು ಸೂಚಿಸುತ್ತೇನೆ ಎಂದು ಹೇಳಿದರು.
ತಲಪಾಡಿ ಕೆ.ಸಿ.ರೋಡ್ ಸಮೀಪ ಮಾರುತಿ ಓಮ್ನಿ, ರಿಕ್ಷಾ ಹಾಗೂ ಸ್ಕೂಲ್ ಬಸ್ಗಳಲ್ಲಿ ಲೆಕ್ಕಕ್ಕಿಂತ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಉಸಿರು ಕಟ್ಟುವಂತೆ ತುಂಬಿಸಲಾಗುತ್ತದೆ ಎಂದ ನಾಗರಿಕರೊಬ್ಬರಿಗೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಲಾಗುತ್ತಿದ್ದು, ತಕ್ಷಣ ಗಮನ ಹರಿಸುತ್ತೇವೆ ಎಂದು ತಿಳಿಸಿದರು.
ರಸ್ತೆಗಳ ಎರಡೂ ಇಕ್ಕೆಲಗಳಲ್ಲಿ ವಾಹನಗಳ ಪಾರ್ಕಿಂಗ್, ಸರಕಾರಿ ಬಸ್ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು, ಹೊಸ ಹಂಪ್ಸ್ ಹಾಕಿದರೂ ಹಳೆಯ ಹಂಪ್ಸ್ಗಳ ತೆರವು ಆಗಿಲ್ಲ, ಕದ್ರಿ ಪಾರ್ಕ್ ಬಳಿ ಅಧಿಕೃತ ರಿಕ್ಷಾ ಪಾರ್ಕ್ ಇಲ್ಲ, ಪಂಪ್ ವೆಲ್ ಮೇಲ್ಸೇತುವೆ ಬಳಿ ಬಸ್ ನಿಲ್ಲಿಸುವುದರಿಂದ ತೊಂದರೆ, ಕಾರ್ಗಳಿಗೆ ಟಿಂಟ್ ಅಳವಡಿಕೆ ಅಧಿಕವಾಗುತ್ತಿದೆ, ಜ್ಯೋತಿ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಹೆಸರು ಇದ್ದರೂ, ಬಸ್ ನಿಲ್ದಾಣದಲ್ಲಿ ಇನ್ನೂ ಅಂಬೇಡ್ಕರ್ ಹೆಸರು ನಮೂದಿಸಿಲ್ಲ, ಲಾಲ್ ಬಾಗ್ನ ಕೆಎಸ್ಆರ್ಟಿಸಿ ಪಕ್ಕದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ನಿಂದಾಗಿ ಮಾರ್ಗದಲ್ಲೆಲ್ಲಾ ಮದ್ಯ ಸೇವನೆ ಮಾಡಿದವರಿಂದ ಸಾರ್ವಜನಿಕರಿಗೆ ತೊಂದರೆ ಇತ್ಯಾದಿ 27 ದೂರುಗಳು ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದವು.