ಬೆಳ್ತಂಗಡಿ: ತಾಲೂಕಿನ ಹಳ್ಳಿಯಾದರೂ ಇತ್ತ ದಕ್ಷಿಣ ಕನ್ನಡ ಜಿಲ್ಲೆಗೆ ದೂರ, ಅತ್ತ ಚಿಕ್ಕಮಗಳೂರು ಜಿಲ್ಲೆಗೆ ಹತ್ತಿರವಿರುವ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಅಲೆಗೆ ತುತ್ತಾಗದೆ ಇದುವರೆಗೆ ಸುರಕ್ಷಿತವಾಗಿದೆ. ಅಂತೆಯೇ ದ.ಕ ಜಿಲ್ಲೆಯ ಹಾಗೂ ಬೆಳ್ತಂಗಡಿ ತಾಲೂಕಿನ ಈ ಭಾಗದ ಕೊನೆಯಲ್ಲಿರುವ ನೆರಿಯ ಗ್ರಾಮದ ಬಾಂಜಾರುಮಲೆ ಪ್ರದೇಶದಲ್ಲಿಯೂ ಕೂಡ ಎರಡು ಅವಧಿಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಸೋಂಕು ಬಾರದಿರಲು ಹಳ್ಳಿಗರು ವಿಧಿಸಿರುವ ಕಟ್ಟುಪಾಡುಗಳೇನು?:
ಈ ವರ್ಷ ಗ್ರಾಮಾಂತರ ಪ್ರದೇಶಗಳನ್ನು ಬೆಂಬಿಡದೆ ಕಾಡುತ್ತಿರುವ ಕೋವಿಡ್, ಹಳ್ಳಿಯ ಜನರ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಕಾಡಂಚಿನ ದುರ್ಗಮ ಪ್ರದೇಶದಲ್ಲಿ ಇರುವ ಎಳನೀರು ಹಾಗೂ ಬಾಂಜಾರುಮಲೆಗಳ ಜನತೆ ಹೊರ ಜಿಲ್ಲೆಗಳ ಜನರು ಈ ಭಾಗಕ್ಕೆ ಸುಳಿಯದಂತೆ ಮುಂಜಾಗ್ರತೆ ವಹಿಸಿದ್ದಾರೆ. ಅದೇ ರೀತಿ ತಾವೂ ಅನಗತ್ಯ ಓಡಾಟ ನಡೆಸುತ್ತಿಲ್ಲ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಕಾರಣದಿಂದ ಈ ಎರಡು ಪ್ರತ್ಯೇಕ ಹಳ್ಳಿಗಳು ಸುರಕ್ಷಿತ ವಲಯಗಳಾಗಿವೆ. ಈ ಪ್ರದೇಶಗಳಲ್ಲಿ ಯಾವುದೇ ಹೆಚ್ಚಿನ ಸೌಕರ್ಯಗಳಿಲ್ಲದಿದ್ದರೂ, ಇಲ್ಲಿನ ಮಂದಿ ಆರೋಗ್ಯದ ಬಗ್ಗೆ ಅತಿ ಹೆಚ್ಚು ಮುಂಜಾಗ್ರತೆ ವಹಿಸುತ್ತಿರುವ ಕಾರಣ ಕೋವಿಡ್ ಬಾಧೆ ಉಂಟಾಗಿಲ್ಲ.
ಬಾಂಜಾರುಮಲೆ ಗ್ರಾಮ:
ನೆರಿಯ ಗ್ರಾಮ ವ್ಯಾಪ್ತಿಯ ಬಾಂಜಾರುಮಲೆಗೆ ಚಾರ್ಮಾಡಿ ಘಾಟ್ನ 9ನೇ ತಿರುವಿನಲ್ಲಿ ಬಲಕ್ಕೆ ತಿರುಗಿ 10 ಕಿ.ಮೀ. ಸಾಗಬೇಕು. ಪರಿಶಿಷ್ಟ ಜಾತಿಯ 43 ಕುಟುಂಬಗಳಿದ್ದು, 168 ರಷ್ಟು ಜನಸಂಖ್ಯೆ ಇದೆ. ಸರಿಯಾದ ರಸ್ತೆ ಸಹಿತ ಯಾವುದೇ ಹೆಚ್ಚಿನ ವ್ಯವಸ್ಥೆ ಇಲ್ಲದೆ ಇಲ್ಲಿನ ಮಂದಿ ಕಾಡಾನೆ ಹಾಗೂ ಇತರ ವನ್ಯ ಮೃಗಗಳ ಭಯದ ಮಧ್ಯೆ ಜೀವನ ನಡೆಸುತ್ತಿದ್ದಾರೆ.
ಅಡಕೆ, ತೆಂಗು, ರಬ್ಬರ್ ಕೃಷಿಯ ಮಧ್ಯೆ ಸಾವಯವ ತರಕಾರಿಯನ್ನು ಬೆಳೆಯುತ್ತಾರೆ. ಕೊರೊನಾ ಸಮಯದಲ್ಲಿ ಇಲ್ಲಿಯವರು ಮನೆ ಬಿಟ್ಟು ಹೊರಬರುವುದಿಲ್ಲ. ಅಗತ್ಯ ಸಾಮಗ್ರಿಗಳನ್ನು ಪಂಚಾಯಿತಿ ಸದಸ್ಯ ಅಥವಾ ಯಾರಾದರೂ ಒಂದಿಬ್ಬರು 20 ಕಿಮೀ ದೂರದಲ್ಲಿರುವ ಕಕ್ಕಿಂಜೆ ಪೇಟೆಯಿಂದ ತರುತ್ತಾರೆ. ಹೊರ ಪ್ರದೇಶದ ಜನರು ತಮ್ಮ ಪರಿಸರಕ್ಕೆ ಬರದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಬಾಂಜಾರುಮಲೆ ನಿವಾಸಿಗಳಿಗೆ ಪಡಿತರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಪೌಷ್ಟಿಕ ಆಹಾರವನ್ನು ಅಲ್ಲಿನ ಸಮುದಾಯ ಭವನಕ್ಕೆ ಪ್ರತಿ ತಿಂಗಳು ಕಳುಹಿಸಿಕೊಡಲಾಗುತ್ತದೆ. ಇದರಿಂದ ಹೆಚ್ಚಿನ ಮಂದಿ ಪೇಟೆಗಳಿಗೆ ತೆರಳುವ ಅಗತ್ಯ ಇರುವುದಿಲ್ಲ. ಈ ಕಾರಣದಿಂದ ಬಾಂಜಾರುಮಲೆ ಪ್ರದೇಶ ಕೋವಿಡ್ನಿಂದ ಸುರಕ್ಷಿತವಾಗಿದೆ ಎಂದು ನೆರಿಯ ಗ್ರಾಮ ಪಂಚಾಯಿತಿ ಪಿಡಿಒ ಗಾಯತ್ರಿ ಪಿ. ತಿಳಿಸಿದ್ದಾರೆ.
ಎಳನೀರು ಗ್ರಾಮ:
ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಎಳನೀರು ಪ್ರದೇಶದಲ್ಲಿ 140 ಮನೆಗಳಿದ್ದು, ಸುಮಾರು 650 ಜನಸಂಖ್ಯೆ ಇದೆ. ಇಲ್ಲಿ ಸಾಕಷ್ಟು ಬಾರಿ ಲಸಿಕೆ ನೀಡುವ ಹಾಗೂ ಗಂಟಲು ದ್ರವ ಪರೀಕ್ಷೆ ಶಿಬಿರ ಹಾಗೂ ಕೊರೊನಾ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸ್ಯ್ವಾಬ್ ಪರೀಕ್ಷೆಗೆ ಹಾಜರಾದ ಎಲ್ಲರ ವರದಿಗಳು ನೆಗೆಟಿವ್ ಬಂದಿವೆ.
ಎಳನೀರು ಪ್ರದೇಶಕ್ಕೆ ಮುಂಡಾಜೆಯಿಂದ ತೆರಳಬೇಕಾದರೆ 15 ಕಿ.ಮೀ. ದೂರದ ದಿಡುಪೆವರೆಗೆ ಹೋಗಿ, ಅಲ್ಲಿಂದ ದುರ್ಗಮವಾದ ಕೇವಲ ಜೀಪು ಮಾತ್ರ ಸಂಚರಿಸಬಹುದಾದ ಕಲ್ಲು, ಮಣ್ಣು, ಕೆಸರು ಹಳ್ಳ, ಕೊಳ್ಳ, ದಿಬ್ಬಗಳನ್ನು ದಾಟುತ್ತಾ ವನ್ಯಮೃಗಗಳ ಭಯದೊಂದಿಗೆ 7 ಕಿ.ಮೀ. ದೂರವನ್ನು ಕ್ರಮಿಸಬೇಕು. ಈ ದೂರವನ್ನು ಕ್ರಮಿಸಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಅವಧಿ ಬೇಕು. ಚಾರ್ಮಾಡಿ ಅಥವಾ ಬಜಗೋಳಿ ಮೂಲಕ ಹೆದ್ದಾರಿಯಲ್ಲಿ ಹೋಗಿ ಬರುವುದಾದರೆ ಸುಮಾರು 120 ಕಿ.ಮೀ. ಪ್ರಯಾಣವಾಗುತ್ತದೆ. ಈ ಪ್ರದೇಶಕ್ಕೆ ಯಾವ ದಾರಿಯಲ್ಲಿ ಹೋಗಿ ಬಂದರು ಕನಿಷ್ಠ ನಾಲ್ಕು ಗಂಟೆಗಳಷ್ಟು ಪ್ರಯಾಣ ಮಾಡಬೇಕಾದುದು ಅನಿವಾರ್ಯ.
ಆರೋಗ್ಯ ಸಿಬ್ಬಂದಿಯಿಂದ ಮುಂಜಾಗ್ರತೆ ಕುರಿತು ಮಾಹಿತಿ:
ಚಿಕ್ಕಮಗಳೂರು ಜಿಲ್ಲೆಯ ಸಂಸೆಯಿಂದ ಎಳನೀರು 5 ಕಿ.ಮೀ. ವ್ಯಾಪ್ತಿಯ ಒಳಗಿದೆ. ಇಂತಹ ಈ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಆರೋಗ್ಯ, ಪಂಚಾಯಿತಿ ಹಾಗೂ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರು ಹೋಗಿ ಬರುವುದೇ ಒಂದು ಸವಾಲು. ಇಲ್ಲಿ ಯಾವುದೇ ಶಿಬಿರಗಳನ್ನು ನಡೆಸಬೇಕಾದರೆ ಅಗತ್ಯ ಸೌಲಭ್ಯಗಳು ಇಲ್ಲ. ಮೊಬೈಲ್ನಲ್ಲಿ ಮಾತನಾಡುವಷ್ಟು ನೆಟ್ವರ್ಕ್ ಸಿಗುವುದಿಲ್ಲ. ಶಿಬಿರಗಳನ್ನು ನಡೆಸುವಾಗ ಆನ್ಲೈನ್ ನೋಂದಾವಣೆ ಮಾಡುವುದು ಬಹುದೊಡ್ಡ ಸವಾಲು. ಇದಕ್ಕಾಗಿ ಗುಡ್ಡ ಬೆಟ್ಟಗಳನ್ನು ಏರಬೇಕಾದ ಅಗತ್ಯವಿದೆ. ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ತಂಡ ಜನರ ಯೋಗಕ್ಷೇಮ ವಿಚಾರಿಸಿ ಮುಂಜಾಗ್ರತೆ ಕುರಿತು ಮಾಹಿತಿ ನೀಡುತಿದ್ದಾರೆ.
ಹೊರಗಿನ ಜನರಿಗೆ ನಿರ್ಬಂಧ:
ಕೋವಿಡ್ ಸಂದರ್ಭದಲ್ಲಿ ಜಲಪಾತ, ಚಾರಣ ಹಾಗೂ ಇನ್ನಿತರ ಆಕರ್ಷಣೆಗಳನ್ನು ಹೊಂದಿರುವ ಈ ಪರಿಸರವನ್ನು ಹೊರಗಿನ ಜನ ಬರದಂತೆ ಊರವರು ಒಟ್ಟಾಗಿ ನೋಡಿಕೊಳ್ಳುತ್ತಿದ್ದೇವೆ. ಹೊರ ಜಿಲ್ಲೆಯಲ್ಲಿರುವ ಇಲ್ಲಿನ ಮಂದಿ ಕೋವಿಡ್ ಸಮಯದಲ್ಲಿ, ಈ ಪ್ರದೇಶಕ್ಕೆ ಬರದಂತೆ ಪರಸ್ಪರ ಹೊಂದಾಣಿಕೆಯಿಂದ ಮುಂಜಾಗ್ರತೆ ವಹಿಸಿದ್ದೇವೆ. ಇಲ್ಲಿನ ಮಂದಿ ಯಾವುದೇ ಅನಗತ್ಯ ಸಂಚಾರಗಳನ್ನು ನಡೆಸದೆ ರೋಗದ ವಿರುದ್ಧ ಮುಂಜಾಗ್ರತೆ ವಹಿಸುತ್ತಿರುವುದು ಫಲ ನೀಡಿದೆ. ಏನಾದರೂ ಅಗತ್ಯ ವಸ್ತುಗಳ ಅವಶ್ಯಕತೆ ಇದ್ದರೆ ಇಲ್ಲೆ ಹತ್ತಿರದ ಅಂಗಡಿಯಲ್ಲಿ ಬಹಳ ಎಚ್ಚರಿಕೆಯಿಂದ ಖರೀದಿಸಿ ಮನೆ ಸೇರಿಕೊಳ್ಳುತ್ತೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಕಾಶ್ ಜೈನ್.
ಹರೀಶ್ ಪೂಂಜ ಅವರಂತಹ ಶಾಸಕರು ಸಿಕ್ಕಿದ್ದು ನಮ್ಮ ಭಾಗ್ಯ:
ಶಾಸಕ ಹರೀಶ್ ಪೂಂಜ ಇವರ ಸೂಚನೆಯಂತೆ ಸಂಚಾರಿ ಪಡಿತರ ವಾಹನ ನಮ್ಮ ಈ ಭಾಗಕ್ಕೆ ಬರುತಿದ್ದು ಇದರಿಂದ ನಮ್ಮ ಜನರಿಗೆ ತುಂಬಾ ಅನುಕೂಲವಾಗಿದೆ. ಅಡಿಕೆ ಹಾಗೂ ಕಾಫಿ ಇಲ್ಲಿಯ ಜನರ ಪ್ರಧಾನ ಕೃಷಿ. ಆದರೆ ಕಳೆದ ಎರಡು ವರ್ಷಗಳಿಂದ ಅಡಿಕೆಗೆ ಯಾವುದೋ ರೋಗ ಬಂದ್ದು ಅಡಿಕೆ ಕೃಷಿ ನಾಶವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಸ್ತೆಯ ಸಮಸ್ಯೆಯಿಂದಾಗಿ ನಮಗೆ ಕೇಂದ್ರ ಸ್ಥಾನ ತಲುಪಲು ಸುತ್ತಿ ಬಳಸಿ ಬರಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಇದ್ದೇವೆ. ಈಗಿನ ಶಾಸಕರ ಮುತುವರ್ಜಿಯಿಂದ ಎಳನೀರು ದಿಡುಪೆ ರಸ್ತೆ ದುರಸ್ತಿಯಾಗಿದ್ದು, ಬೈಕ್ ಅಥವಾ ಜೀಪ್ ಮೂಲಕ ಪಂಚಾಯಿತಿಗೆ ಹೋಗಬಹುದು. ಈ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಕೇವಲ 7 ಕಿ. ಮೀ. ಆದರೆ ಮಳೆಗಾಲದಲ್ಲಿ ಅಥವಾ ಬೇರೆ ವಾಹನದಲ್ಲಿ ಸಾಗಬೇಕಾದರೆ ಸುಮಾರು 120 ಕಿ.ಮೀ ಸುತ್ತಿ ಬಳಸಿ ಬರಬೇಕಾದ ಸಂದಿಗ್ದ ಸ್ಥಿತಿಯಲ್ಲಿ ನಾವಿದ್ದೇವೆ.
ಈ ಕಚ್ಚಾ ರಸ್ತೆಯು ರಕ್ಷಿತಾರಣ್ಯದೊಳಗೆ ಇರುವುದರಿಂದ ಅಭಿವೃದ್ಧಿ ಪಡಿಸಲು ತೊಡಕ್ಕಾಗುತಿದೆ. ಶಾಸಕರ ಸ್ಪಂದನೆಯ ಬಗ್ಗೆ ಮಾತನಾಡಿದ ಅವರು ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಶಾಸಕರು ಕಲ್ಪಿಸಿದ್ದಾರೆ ಉತ್ತಮ ರೀತಿಯಲ್ಲಿ ನಮ್ಮೊಂದಿಗೆ ಸ್ಪಂದಿಸುತ್ತಿರುವ ಇಂತಹ ಶಾಸಕರು ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಶಾಸಕ ಹರೀಶ್ ಪೂಂಜರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
20 ಮನೆಗಳ ಸಂಪರ್ಕಕ್ಕಾಗಿ ನದಿಗೆ ಸ್ಟೀಲ್ ಬ್ರೀಡ್ಜ್ ನಿರ್ಮಿಸಿ ಕೊಟ್ಟಿದ್ದಾರೆ. 3 ವರ್ಷಗಳಲ್ಲಿ ಸುಮಾರು 50 ಲಕ್ಷ ರೂ ಅನುದಾನವನ್ನು ಒದಗಿಸಿದ್ದಾರೆ. ಅದಲ್ಲದೆ ಈ ಭಾಗದಲ್ಲಿ ವಿದ್ಯುತ್ ಇಲ್ಲದೆ ಇರುವುದರಿಂದ ಇದರ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಲವಂತಿಗೆ ಗ್ರಾಮದ ಎಳನೀರು ಹಾಗೂ ನೆರಿಯ ಗ್ರಾಮದ ಬಾಂಜಾರುಮಲೆ ಪರಿಸರದ ಬಂಧುಗಳು ಕೊರೊನಾ ಮುಕ್ತ ಜೀವನ ನಡೆಸುತ್ತಿರುವುದು ಸಂತೋಷದಾಯಕ ವಿಚಾರ. ಆ ಭಾಗದ ಎಲ್ಲ ಜನರು ತಮ್ಮ ವೃತಿ ಬದುಕು ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಕೊರೊನಾ ಮಹಾಮಾರಿಯ ಒಂದನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಕೊರೊನಾ ಮುಕ್ತ ಜೀವನ ನಡೆಸುತ್ತಿರುವುದು ಎಲ್ಲರಿಗೂ ಪ್ರೇರಣೆ. ಮೂರು ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ಮುಂದೆಯೂ ಆ ಭಾಗದ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕ್ಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್