ಕಡಬ(ದ.ಕ): ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ‘ಜಾಗೋ ಕಿಸಾನ್,’ ‘ಕೃಷಿ ಸಂಹಾರ ಬಿಜೆಪಿಯ ಹುನ್ನಾರ’ ಎಂಬ ಶೀರ್ಷಿಕೆಯಡಿ ದೇಶವ್ಯಾಪಿ ಅಭಿಯಾನ ಕೈಗೊಂಡಿದ್ದು, ಇದರ ಅಂಗವಾಗಿ ಎಸ್ಡಿಪಿಐ ದ.ಕ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಕಡಬದಲ್ಲಿ ನಡೆಸಲಾಯಿತು.
ಕಡಬ ತಾಲೂಕು ಕಛೇರಿ ಎದುರು ಎಸ್ಡಿಪಿಐ ಧ್ವಜ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಇಲ್ಲಿನ ಕಳಾರವರೆಗೆ ಜಾಥಾ ನಡೆಸಲಾಯಿತು.
ಈ ವೇಳೆ ಮಾತನಾಡಿದ ದ.ಕ ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ, ವಿದ್ಯುತ್ ಇಲಾಖೆ ಖಾಸಗೀಕರಣ, ಭೂ ಮಸೂದೆ ಮೊದಲಾದ ಮಸೂದೆಗಳು ರೈತ ವಿರೋಧಿಯಾಗಿದ್ದು ನಾವೆಲ್ಲರೂ ಇದನ್ನು ಒಕ್ಕೂರಲಿನಿಂದ ವಿರೋಧಿಸಬೇಕಾಗಿದೆ ಎಂದಿದ್ದಾರೆ. ರೈತರಿಗೆ ಕಾನೂನು ತರುವ ಬದಲು ಭ್ರಷ್ಟರಿಗೆ, ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿ ಮಾಡಿ ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿಗೆ ತಾಕತ್ ಇದ್ದರೆ ಜನಪ್ರತಿನಿಧಿಗಳಿಗೆ ನೀಡುವ ಪಿಂಚಣಿಯನ್ನು ನಿಲ್ಲಿಸಲಿ, ದೇಶದ್ರೋಹ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಿ ಎಂದು ಸವಾಲು ಹಾಕಿದರು.