ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೂಲಕ ನೂರಾರು ಮಂದಿ ಮದ್ಯವ್ಯಸನ ಮುಕ್ತರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಹೊಸ ಬಾರ್ಗೆ ಪರವಾನಗಿ ನೀಡುತ್ತಿದೆ. ಆದ್ದರಿಂದ ಇದಕ್ಕೊಂದು ಅಂತಿಮ ರೂಪ ನೀಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅಖಿಲ ಭಾರತ ಜನಜಾಗೃತಿ ವೇದಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯಸನಮುಕ್ತರ ಸಾಧಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ವೀರೇಂದ್ರ ಹೆಗ್ಗಡೆಯವರ ಅಭಿಪ್ರಾಯವನ್ನು ಕ್ರೋಢೀಕರಿಸಿಕೊಂಡು ಯಾವ ರೀತಿ ಗ್ರಾಮಾಭಿವೃದ್ಧಿಗೆ ಹೆಜ್ಜೆಯನ್ನು ಇರಿಸಿದ್ದೇವೋ, ಅದೇ ರೀತಿ ಮದ್ಯಪಾನ ನಿಷೇಧ ಹಾಗೂ ಮದ್ಯವರ್ಜನ ಶಿಬಿರಕ್ಕೆ ಸರ್ಕಾರ ಮತ್ತು ಪಾನ ನಿರೋಧ ಮಂಡಳಿಯ ವತಿಯಿಂದ ಯೋಜನೆಯನ್ನು ರೂಪಿಸಲು ಪ್ರಯತ್ನ ಪಡುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಇಡೀ ಕರ್ನಾಟಕ ಸರ್ಕಾರಕ್ಕೆ ಸುಮಾರು 18 ಸಾವಿರ ಕೋಟಿ ರೂ. ಆದಾಯ ಬರುವುದು ಅಬಕಾರಿ ಇಲಾಖೆಯಿಂದ. ಆದರೆ ಇಷ್ಟು ಆದಾಯ ಬರುವ ಬಾರ್ಗಳನ್ನು ಮುಚ್ಚಿದರೆ ಸರ್ಕಾರದ ಬೊಕ್ಕಸಕ್ಕೆ ಅಷ್ಟು ಕೋಟಿ ರೂ. ನಷ್ಟವಾಗುತ್ತದೆ. ಆದರೆ ಮದ್ಯಪಾನಿಗಳು ಮಾಡುವ ಅವಾಂತರವನ್ನು ನಿಯಂತ್ರಣ ಮಾಡಲು ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಅಬಕಾರಿ ಇಲಾಖೆಯಿಂದ 10% ಜಾಸ್ತಿ ಖರ್ಚು ಮಾಡಬೇಕಾಗುತ್ತದೆ ಎಂಬ ವರದಿ ಬಂದಿತ್ತು. ಆದ್ದರಿಂದ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಶಾಸನವನ್ನು ಸರ್ಕಾರ ಅನುಷ್ಠಾನಗೊಳಿಸಿ ಮದ್ಯ ವ್ಯಸನಿಗಳನ್ನು ಪುನರುಜ್ಜೀವನ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸುಮಾರು 27 ವರ್ಷಗಳಿಂದ ಜನರಲ್ಲಿರುವ ಮದ್ಯಪಾನ, ಡ್ರಗ್ಸ್ ಮುಂತಾದ ದುಶ್ಚಟಗಳನ್ನು ಬಿಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಈ ವೇದಿಕೆಯ ಮೂಲಕ ಮಾದಕ ವ್ಯಸನಿಗಳ ಮನಪರಿವರ್ತನೆ ಮಾಡಿ ದುಶ್ಚಟಗಳಿಂದ ಮುಕ್ತರಾಗುವಂತೆ ಮಾಡುತ್ತೇವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದುಶ್ಚಟಗಳಿಂದ ದೂರ ಇರುವಂತೆಯೂ ಮಾರ್ಗದರ್ಶನ ನೀಡುತ್ತಿದ್ದೇವೆ. ಹಾಗಾಗಿ ಶಿಬಿರದ ಮೂಲಕ ನೂರು ದಿವಸ ಯಾರು ಮುಗಿಸಿದ್ದಾರೆ ಅವರಿಗೆ ಮನೋಸ್ಥೈರ್ಯ ತುಂಬಲು ಅವರಿಗೆ ಮತ್ತೆ ಮಾದಕ ವ್ಯವಸನದಿಂದ ದೂರ ಇರುವಂತೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ವ್ಯಸನಮುಕ್ತ ಸಾಧಕರಿಗೆ ಐಡಿ ಕಾರ್ಡ್ಗಳು, ಅಭಿನಂದನಾ ಪತ್ರಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಅಲ್ಲದೆ ಅತೀ ಹೆಚ್ಚು ಜನರನ್ನು ಮಾದಕ ವ್ಯಸನದಿಂದ ಮುಕ್ತರಾಗುವಂತೆ ಮಾಡಿದವರನ್ನು ಸನ್ಮಾನಿಸಲಾಯಿತು.