ಮಂಗಳೂರು (ದಕ್ಷಿಣ ಕನ್ನಡ): ನಗರದ ಪಣಂಬೂರು ಕಡಲ ಕಿನಾರೆಯ ಸಮೀಪ ನಿಷೇಧಿತ ತಿಮಿಂಗಿಲ ವಾಂತಿ (ಅಂಬರ್‌ಗ್ರಿಸ್) ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 90 ಲಕ್ಷ ರೂಪಾಯಿ ಮೌಲ್ಯದ ಅಂಬರ್‌ಗ್ರಿಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮ ಗ್ರಾಮದ ನಿವಾಸಿ ಜಯಕರ (39), ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಆದಿತ್ಯ (25) ಹಾಗು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ನಿವಾಸಿ ಲೋಹಿತ್ ಕುಮಾರ್ ಗುರಪ್ಪನವರ್ (39) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಣಂಬೂರು ಬೀಚ್ ಬಳಿ ಸೋಮವಾರ ದಾಳಿ ನಡೆಸಿದ್ದರು. ಅಂಬರ್‌ಗ್ರಿಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯುಳ್ಳದ್ದಾಗಿದೆ. ಆರೋಪಿಗಳಿಂದ 900 ಗ್ರಾಂ ತೂಕದ ಅಂಬರ್‌ಗ್ರಿಸ್ ಜಪ್ತಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ಧಾರೆ.
ಹಿಂದಿನ ಪ್ರಕರಣಗಳು: ಮಂಗಳೂರು ನಗರದಲ್ಲಿ 3.48 ಕೋಟಿ ರೂ. ಮೌಲ್ಯದ 3 ಕೆಜಿ 480 ಗ್ರಾಂ ತಿಮಿಂಗಿಲ ವಾಂತಿಯನ್ನು (ಅಂಬರ್‌ಗ್ರಿಸ್) ಅಕ್ರಮವಾಗಿ ಮಾರಲು ಯತ್ನಿಸುತ್ತಿದ್ದ ಆರು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದರು. ಕುಂದಾಪುರ ತಾಲೂಕಿನ ಪ್ರಶಾಂತ್ (24), ಬೆಂಗಳೂರಿನ ಸತ್ಯರಾಜ್ (32), ಮಂಗಳೂರಿನ ತೆಂಕೆ ಎಡಪದವು ಗ್ರಾಮದ ರೋಹಿತ್ (27), ಮಂಗಳೂರಿನ ಅಡ್ಡೂರು ಗ್ರಾಮದ ರಾಜೇಶ್ (37), ಮಂಗಳೂರಿನ ತೆಂಕೆ ಎಡಪದವು ಗ್ರಾಮದ ವಿರೂಪಾಕ್ಷ ಹಾಗು ಉಡುಪಿ ಜಿಲ್ಲೆಯ ಕಾಪುವಿನ ನಾಗರಾಜ್ (31) ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಇವರು ತಮಿಳುನಾಡಿನ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡಿದ ಅಂಬರ್‌ಗ್ರಿಸ್ ಅನ್ನು ಮಂಗಳೂರಿಗೆ ತಂದು ಮಾರಾಟಕ್ಕೆ ಪ್ರಯತ್ನಿಸಿದ್ದರು. ಪೊಲೀಸರು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ಆರೋಪಿಗಳನ್ನು ಬಂಧಿಸಿದ್ದು, ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಮೈಸೂರು: ₹25 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ; ಮೂವರು ಸೆರೆ