ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ ತಡರಾತ್ರಿ 11 ಗಂಟೆಗೆ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಬೆಳಗ್ಗೆಯಾದರೂ ಹೊರಡದೆ ಇರುವುದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತಡರಾತ್ರಿ ದುಬೈಗೆ ಹೊರಡಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್ ಹಾಳಾಗಿದೆ ಎಂದು ಪ್ರಯಾಣಿಕರಿಗೆ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೇ ಇರುವುದರಿಂದ ಪ್ರಯಾಣಿಕರು ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತೆ ಆಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ರಾತ್ರಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ 180ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುತ್ತಿದ್ದಾರೆ. ಏರ್ಪೋರ್ಟ್ ಲಾಂಜ್ನಲ್ಲಿ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಏರ್ ಇಂಡಿಯಾ ಅಧಿಕಾರಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದರು. ತಿರುವನಂತಪುರಂ ಏರ್ ಇಂಡಿಯಾ ಬೇಸ್ಗೆ ರಿಪೇರಿಗೆ ತೆರಳಿರುವ ವಿಮಾನ ಬೆಳಗ್ಗೆ 9 ಗಂಟೆಗೆ ತಾಂತ್ರಿಕ ತೊಂದರೆ ನಿವಾರಿಸಿಕೊಂಡು ಬರಬೇಕಿತ್ತು. ಆದರೆ, ವಿಮಾನವು ಬಂದಿಲ್ಲವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿಕ್ರಿಯೆ: ''ವಿಮಾನವು ಜುಲೈ 10 ರಂದು ರಾತ್ರಿ 11.05ಕ್ಕೆ ಹೊರಡಲು ನಿರ್ಧರಿಸಲಾಗಿತ್ತು. ಅಂತಿಮವಾಗಿ ಜುಲೈ 11 ರಂದು ಮಧ್ಯಾಹ್ನ 12.10ಕ್ಕೆ ತಿರುವನಂತಪುರಂನಿಂದ AIE ಕಳುಹಿಸಿದ ವಿಮಾನದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಯಿತು''.
"ಜುಲೈ 10 ರಂದು ಮಂಗಳೂರು-ದುಬೈ ವಿಮಾನ ವಿಳಂಬದಿಂದ ನಮ್ಮ ಅತಿಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ತಾಂತ್ರಿಕ ದೋಷದಿಂದಾಗಿ, ವಿಮಾನವು 12 ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು. ಇಂದು 12.10 ಗಂಟೆಗೆ ಟೇಕ್ ಆಫ್ ಆಯಿತು. ಪ್ರಯಾಣವನ್ನು ಸುಗಮಗೊಳಿಸಲು, ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು. ಮಂಗಳೂರು-ತಿರುವನಂತಪುರ-ದುಬೈ ಮಾರ್ಗದಲ್ಲಿ ಸಂಪರ್ಕ ವಿಮಾನ ಅಥವಾ ಹೋಟೆಲ್ ಸೌಕರ್ಯಗಳಂತಹ ಪರ್ಯಾಯ ಆಯ್ಕೆಗಳನ್ನು ನೀಡಿದ್ದರೂ, ಅತಿಥಿಗಳು ವಿಮಾನದ ಆಗಮನಕ್ಕಾಗಿ ಕಾಯಲು ನಿರ್ಧರಿಸಿದರು. ಏರ್‌ಲೈನ್ ಸಿಬ್ಬಂದಿ ಅತಿಥಿಗಳಿಗೆ ನಿಯಮಿತ ಮಧ್ಯಂತರದಲ್ಲಿ ಉಪಹಾರಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮ ಅತಿಥಿಗಳ ಸಹಕಾರವನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿಕ್ರಿಯೆ ನೀಡಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಜುಲೈ 8 ರಂದು ಭಾರಿ ಮಳೆ ಸುರಿದ ಪರಿಣಾಮ ವಿಮಾನ ಲ್ಯಾಂಡಿಂಗ್ಗೆ ಸಮಸ್ಯೆಯಾಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ಹಾಗೂ ದುಬೈಯಿಂದ ಆಗಮಿಸಿರುವ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡಿಂಗ್ ಆಗಿದ್ದವು. ಅಲ್ಲದೇ ಹೈದರಾಬಾದ್ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತುಹಾಕಿ ತುಂಬಾ ಸಮಯದ ನಂತರ ಲ್ಯಾಂಡ್ ಆಗಿತ್ತು.
ಕೆಲಸದ ಸಮಯ ಆಯ್ತು ಎಂದು ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿದ್ದ ಪೈಲಟ್: ಜೂನ್ 25 ರಂದು ಆಶ್ಚರ್ಯಕರ ಘಟನೆಯೊಂದು ನಡೆದಿದ್ದು, ಲಂಡನ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಎಐ ಫ್ಲೈಟ್ 112 ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ತುರ್ತು ಭೂಸ್ಪರ್ಶ ಕಂಡಿದೆ. ಕ್ಲಿಯರೆನ್ಸ್ ಸಿಕ್ಕ ಬಳಿಕ ಪೈಲಟ್ ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ವಿಮಾನ ಹಾರಿಸಲು ನಿರಾಕರಿಸಿದ್ದರು. ಇದರಿಂದ ಪ್ರಯಾಣಿಕರು ಬಸ್, ಕ್ಯಾಬ್ಗಳ ಮೂಲಕ ತಮ್ಮ ಗಮ್ಯ ಸ್ಥಾನ ತಲುಪಿದ್ದರು. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಎಐ ಫ್ಲೈಟ್ 112 ಮುಂಜಾನೆ 4 ಗಂಟೆಗೆ ದೆಹಲಿ ತಲುಪಬೇಕಿತ್ತು. ದುರದೃಷ್ಟವಶಾತ್, ಪ್ರತಿಕೂಲ ಹವಾಮಾನದ ಕಾರಣ ಜೈಪುರಕ್ಕೆ ತಿರುಗಿಸಲಾಗಿದೆ. ಅಲ್ಲಿ ಸುಮಾರು 2 ಗಂಟೆಗಳ ವಿಳಂಬದ ನಂತರ, ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ತನ್ನ ಕೆಲಸದ ಸಮಯ ಮುಗಿದಿದೆ. ಆದ್ದರಿಂದ ವಿಮಾನ ಹಾರಿಸಲ್ಲ ಎಂದು ಪೈಲಟ್ ನಿರಾಕರಿಸಿದ್ದರು. ಹೀಗಾಗಿ ಇದರಿಂದ 350 ಕ್ಕೂ ಹೆಚ್ಚು ಪ್ರಯಾಣಿಕರು ಜೈಪುರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ಹವಾಮಾನ ವೈಪರೀತ್ಯ : ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನಗಳು