ಬೆಳ್ತಂಗಡಿ: ಕೊರೊನಾ ವೈರಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಬೆಳ್ತಂಗಡಿ ನಗರದ ಬಸ್ ನಿಲ್ದಾಣದಲ್ಲಿ ಬೀದಿನಾಟಕ ಪ್ರದರ್ಶಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಸಹಯೋಗದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಸುರತ್ಕಲ್ ಕರಾವಳಿ ಜಾನಪದ ಕಲಾವೇದಿಕೆಯ ಗಿರೀಶ್ ನಾವಡ ಮತ್ತು ತಂಡ ಬೀದಿನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿತು.
ನಾಟಕದಲ್ಲಿ ಕಾಲರಾ, ಕ್ಷಯ, ಮಲೇರಿಯಾ, ಕ್ಯಾನ್ಸರ್ ಸೇರಿದಂತೆ ಇತ್ತೀಚೆಗೆ ಹಾವಳಿ ಮಾಡುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಹೇಗೆ? ಗುಟ್ಕಾ, ಧೂಮಪಾನ, ಮದ್ಯಪಾನದಿಂದ ಆಗುವ ತೊಂದರೆಗಳ ಬಗ್ಗೆ ಅಭಿನಯದ ಮೂಲಕ ಸಾರ್ವಜನಿಕರ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಕೊರೊನಾ ಜಾಗೃತಿ:
ಬೀದಿನಾಟಕ ಪ್ರದರ್ಶನದಲ್ಲಿ ಕೊರೊನಾ ವೈರಸ್ ಬಗ್ಗೆ ಜನರು ಭಯಪಡುವ ಬದಲು ಮುಂಜಾಗ್ರತೆ ವಹಿಸಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿ ಹೇಳಲಾಯಿತು.
ಬೀದಿ ನಾಟಕ ಪ್ರದರ್ಶನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಆಶಾ ಮೆಂಟರ್ ಹರಿಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಸಹಕರಿಸಿದರು.