ಬಂಟ್ವಾಳ: ಸೃಜನಶೀಲ ಮನಸ್ಸುಳ್ಳ ಮನೆಗಳು ಎಲ್ಲೆಲ್ಲೂ ಹೊಸತನವನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ಮನೆಯೇ ಸಾಕ್ಷಿ.
ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಅವರ ಪತ್ನಿ ರಮ್ಯ ನಿತ್ಯಾನಂದ ಶೆಟ್ಟಿಯವರ ಸೀಮಂತ ಕಾರ್ಯಕ್ರಮವನ್ನು 'ಹಸಿರು ಶ್ರೀಮಂತ' ಎಂಬ ಕಲ್ಪನೆಯೊಂದಿಗೆ ಪರಿಸರಸ್ನೇಹಿಯಾಗಿ ಆಚರಿಸಲಾಯಿತು. ಕೃಷಿಕರಾಗಿರುವ ನಿತ್ಯಾನಂದ ಶೆಟ್ಟಿ ಅವರು ಪಕ್ಷಿ, ಪತಂಗ, ಜೀವಿ ಸಂಕುಲ ಸೇರಿದಂತೆ ಪರಿಸರದ ಉಳಿವಿಗಾಗಿ ಕಳೆದ ಹಲವಾರು ವರ್ಷಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಹಸಿರುಮಯವಾಗಿ ಆಯೋಜಿಸಿ, ಪರಿಸರದ ಕುರಿತು ಜನಜಾಗೃತಿ ಮೂಡಿಸಿದರು. ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕ ಬಾಳೆದಿಂಡು, ಕಾಯಿ ಎಲೆಗಳ ಹಸಿರು ತೋರಣ, ಅಲ್ಲಲ್ಲಿ ಎಲೆ ಮೇಲೆ ಬರೆದು ಹಾಕಲಾದ ಪರಿಸರ ಸಂರಕ್ಷಣೆಯ ಜಾಗೃತಿ ಫಲಕಗಳು ಮತ್ತು ಅಲ್ಲಲ್ಲಿ ಮಣ್ಣಿನ ಮಡಕೆಗಳನ್ನು ಇಟ್ಟು ಎಲ್ಲರ ಗಮನ ಸೆಳೆದರು. ಜೊತೆಗೆ ಪ್ಲಾಸ್ಟಿಕ್ ಮುಕ್ತ ಸಲಕರಣೆಗಳನ್ನು ಬಳಸಿ ಊಟೋಪಚಾರವನ್ನು ತಯಾರಿಸಲಾಗಿತ್ತು.
ಇನ್ನು ಆಮಂತ್ರಣ ಕೂಡ ಹಸಿರುಮಯವಾಗಿದ್ದು, ಕಾರ್ಯಕ್ರಮಗಳ ವಿವರಣೆಯನ್ನು ಬಾಳೆ ಎಲೆ ಮೇಲೆ ಬಿಳಿ ಬಣ್ಣದಲ್ಲಿ ಬರೆದು ಹಾಕಲಾಗಿತ್ತು. ಜೊತೆಗೆ ಪಕ್ಷಿಗಳ ಬಂಧನ ತರವಲ್ಲ, ಅವುಗಳನ್ನು ಬದುಕಲು ಬಿಡಿ. ಪ್ರಕೃತಿಗೆ ಶರಣಾಗೋಣ, ಇಲ್ಲದಿದ್ದರೆ ಪ್ರಕೃತಿಯೇ ನಮ್ಮನ್ನು ಶರಣಾಗಿಸುತ್ತದೆ. ಪಕ್ಷಿಗಳ ಗೂಡನ್ನು ಮುಟ್ಟದಿರಿ, ಅವುಗಳ ಮೊಟ್ಟೆಯನ್ನು ಒಡೆಯದಿರಿ ಎಂಬ ಫಲಕಗಳು ಗಮನ ಸೆಳೆದವು.