ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪಶು ಸಂಜೀವಿನಿ ಯೋಜನೆಯಡಿ 7 ಅನಿಮಲ್ ಕ್ಲಿನಿಕ್ ಆಂಬ್ಯುಲೆನ್ಸ್ಗಳು ಬಂದಿವೆ. ಜಿಲ್ಲೆಯಲ್ಲಿ ಹಿಂದೆ ಕೇವಲ 2 ಮಾತ್ರ ಅನಿಮಲ್ ಕ್ಲಿನಿಕ್ ಆಂಬ್ಯುಲೆನ್ಸ್ ಗಳಿದ್ದವು. ಇದೀಗ ರಾಜ್ಯ ಸರ್ಕಾರ ಮತ್ತೆ ಏಳು ಆಂಬ್ಯುಲೆನ್ಸ್ ನೀಡಿದ್ದರಿಂದ ಅವುಗಳ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಪ್ರಾಣಿಗಳ ತುರ್ತು ಚಿಕಿತ್ಸೆಗಾಗಿ ಅನಿಮಲ್ ಕ್ಲಿನಿಕ್ ಆಂಬ್ಯುಲೆನ್ಸ್ ಉಪಯೋಗಿಸಲಾಗುತ್ತಿದೆ. ಮಾಮೂಲಿ ಆಂಬ್ಯುಲೆನ್ಸ್ ತರಹ ಅನಿಮಲ್ ಕ್ಲಿನಿಕ್ ಆಂಬ್ಯುಲೆನ್ಸ್ನಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿ ಇರುತ್ತಾರೆ. ಯಾವುದೇ ಪ್ರಾಣಿಗಳಿಗೆ ತುರ್ತು ಚಿಕಿತ್ಸೆಗೆ 1962 ಗೆ ಕರೆ ಮಾಡಿದ್ರೆ ಸಾಕು, ತಕ್ಷಣ ಅನಿಮಲ್ ಕ್ಲಿನಿಕ್ ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಲಿದೆ. ಅಗತ್ಯ ಬಿದ್ದರೆ ಸ್ಥಳದಲ್ಲಿ ಸರ್ಜರಿ ಮಾಡುವ ವ್ಯವಸ್ಥೆ ಈ ಆಂಬ್ಯುಲೆನ್ಸ್ನಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಮಾತ್ರ ಈ ಹಿಂದೆ ಆಂಬ್ಯುಲೆನ್ಸ್ ಇದ್ದವು. ಇದೀಗ ತಾಲೂಕಿಗೆ ಒಂದರಂತೆ ಆಂಬ್ಯುಲೆನ್ಸ್ ಇದ್ದು ಸುಸಜ್ಜಿತವಾಗಿವೆ.
ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕ ಡಾ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, 15 ದಿನಗಳ ಹಿಂದೆ ಈ ಆಂಬ್ಯುಲೆನ್ಸ್ಗಳು ಇಲಾಖೆಗೆ ಬಂದು ತಲುಪಿವೆ. ಈ ಆಂಬ್ಯುಲೆನ್ಸ್ಗೆ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿದ್ದು, ಬಳಿಕ ಪೂರ್ಣ ಕಾರ್ಯಾರಂಭ ಮಾಡಲಿವೆ ಎಂದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಡ ಬೇಟೆಯಾಡಿದ ಕಾಳಿಂಗ; ರಕ್ಷಣೆಗೆ ಬಂದ ಉರಗ ತಜ್ಞನ ಮೇಲೆರಗಲು ಯತ್ನ