ಮಂಗಳೂರು : ಕೊರೊನಾ ಸೋಂಕು ನಿವಾರಣೆಗಾಗಿ ರೋಟರಿ ವತಿಯಿಂದ ರಾಷ್ಟ್ರಮಟ್ಟದಲ್ಲಿ 300 ಕೋಟಿ ರೂ. ನೆರವು ನೀಡಲಾಗಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ರೊ.ನಾಗಾರ್ಜುನ ಹೇಳಿದರು.
ರೋಟರಿ ಸಮ್ಮಿಲನ ಸಭಾಂಗಣದಲ್ಲಿ ಜರುಗಿದ ಮೂಡುಬಿದಿರೆ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ರೋಟರಿಯಿಂದ ಗ್ಲೋಬಲ್ ಗ್ರ್ಯಾಂಟ್ ಯೋಜನೆಗಳಡಿ ಈಗಾಗಲೇ ಸುಮಾರು 1.8 ಮಿಲಿಯನ್ ಡಾಲರ್ ನೆರವು, ದಕ್ಷಿಣ ಕನ್ನಡವೂ ಸೇರಿದಂತೆ ದೇಶದ 36 ಜಿಲ್ಲೆಗಳಿಗೆ ಬಂದಿದೆ. ತಲಾ 25 ಸಾವಿರ ಡಾಲರ್‌ನಷ್ಟು ಕೊರೊನಾ ನಿಯಂತ್ರಣ ಚಟುವಟಿಕೆಗಳು ನಡೆದಿದೆ ಎಂದು ಹೇಳಿದರು.
ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ಸುದೀಪ್ ಕುಮಾರ್ ಮತ್ತು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಎಂ ಸಿ ಎಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಬಾಹುಬಲಿ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಯತಿಕುಮಾರ್ ಸ್ವಾಮಿ ಗೌಡ, ನಿರ್ಗಮನ ಅಧ್ಯಕ್ಷ ಸಿ ಹೆಚ್ ಗಪೂರ್, ನಿರ್ಗಮನ ಕಾರ್ಯದರ್ಶಿ ನಾಗರಾಜ್, ಮಾಜಿ ಗವರ್ನರ್ ಸುರೇಶ್ ಚಂಗಪ್ಪ, ವಲಯ ಲೆಫ್ಟಿನೆಂಟ್ ಬಲರಾಮ ಕೆ ಎಸ್ ಮತ್ತಿತರರು ಉಪಸ್ಥಿತರಿದ್ದರು.