ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಇಂದು ಮೂವರು ಸಾವನ್ನಪ್ಪಿದ್ದಾರೆ.
ಸುಳ್ಯ ತಾಲೂಕಿನ ಕೆರೆಮೂಲೆ, ಕೋಡಿಕಲ್ ಮತ್ತು ಕೂಳೂರಿನ ವ್ಯಕ್ತಿಗಳು ಮೃತಪಟ್ಟವರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆರೆಮೂಲೆಯ ಮಹಿಳೆ ವಾರದ ಹಿಂದೆ ಅವರು ಅನಾರೋಗ್ಯಕ್ಕೊಳಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಅದರ ವರದಿ ಬರುವ ಮುನ್ನವೇ ಅವರಿಗೆ ಹೃದಯಾಘಾತವಾಗಿ ಅಸುನೀಗಿದ್ದರು. ಬಳಿಕ ಬಂದ ಗಂಟಲು ದ್ರವ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ದೃಢಪಟ್ಟಿದೆ.
ಇನ್ನು ಮಂಗಳೂರಿನ ಕೂಳೂರು ಮತ್ತು ಕೋಡಿಕಲ್ನ ಓರ್ವ ವ್ಯಕ್ತಿ ಮತ್ತು ಮಹಿಳೆ ಕೊರೊನಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಮೂವರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.