ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೊಂದರೆಗೀಡಾಗಿರುವ ಪ್ರದೇಶಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ನಾವು ಕರಾವಳಿಯ ಕೊಡಗು, ಕಾರವಾರ, ದ.ಕ. ಜಿಲ್ಲೆಗೆ ಭೇಟಿ ನೀಡಿ, ಅತಿವೃಷ್ಟಿಯಿಂದ ಆದ ನಷ್ಟಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ದ.ಕ. ಜಿಲ್ಲೆಗೆ ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯ ಹಾಗೂ ಸಹಕಾರಗಳು ಈಗಾಗಲೇ ಬಂದಿವೆ ಎಂದು ತಿಳಿಸಿದರು.
ಸುಮಾರು 17 ಕೋಟಿ ರೂ. ಹಣ ಈಗಾಗಲೇ ಪಿಡಿಎ ಖಾತೆಯಲ್ಲಿ ಲಭ್ಯವಿದೆ. ಇಂದು ಮತ್ತೆ 5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಇಡೀ ರಾಜ್ಯಕ್ಕೆ ಅತಿವೃಷ್ಟಿಯ ಹಾನಿಯ ಪರಿಹಾರವಾಗಿ ಕೇಂದ್ರ ಸರ್ಕಾರ ಗೃಹ ಇಲಾಖೆಯಿಂದ ಎಸ್ ಡಿ ಆರ್ ಎಫ್ ನಿಂದ 128 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದಲೂ ಗುರುವಾರ 100 ಕೋಟಿ ರೂ. ಬಿಡುಗಡೆಯಾಗಿದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳಿಗೆ ಆರ್ಥಿಕ ತೊಂದರೆ ಇಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದರು.
ಉಪ್ಪಿನಂಗಡಿ ನೇತ್ರಾವತಿ ಕುಮಾರಧಾರ ನದಿ ಸಂಗಮ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಿ ಅಲ್ಲಿನ ಪಕ್ಕದಲ್ಲಿರುವ ಸುಮಾರು 50 ಅಂಗಡಿ ಹಾಗೂ ಮನೆಗಳಲ್ಲಿರುವವರನ್ನು ಸ್ಥಳಾಂತರ ಮಾಡಲಾಯಿತು. ಬಂಟ್ವಾಳದಲ್ಲಿಯೂ ಪ್ರವಾಹ ಪೀಡಿತ ಸ್ಥಳಗಳಲ್ಲಿ ಅವಶ್ಯಕತೆ ಇರುವವರಿಗೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ದ.ಕ.ಜಿಲ್ಲೆಯ ಪ್ರಮುಖ ಸಮಸ್ಯೆ ಕಡಲ್ಕೊರೆತ. ತಕ್ಷಣಕ್ಕೆ ಇದಕ್ಕೆ ಯಾವುದೇ ಪರಿಹಾರ ನೀಡಲು ಆಗುತ್ತಿಲ್ಲ. ಆದರೂ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗದಂತೆ ಕಲ್ಲುಹಾಕುವಂತಹ ಕೆಲಸ ಮಾಡಲಾಗುತ್ತಿದೆ. ಇಂದು ಕೇಂದ್ರದಿಂದ ಮತ್ತೊಂದು ಎನ್ ಡಿಆರ್ ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಮಳೆಯ ತೀವ್ರತೆಯಿಂದ ಎರಡು ಸಾವು ಪ್ರಕರಣ ನಡೆದಿವೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಬೆಳ್ತಂಗಡಿಯಲ್ಲಿ ಪ್ರವಾಹದ ಭೀತಿ ತೀವ್ರವಾಗಿದೆ ಎಂದು ತಿಳಿದು ಬಂದಿದೆ ಎಂದರು.
ಗದಗದಲ್ಲಿ ಪ್ರವಾಹ ಪೀಡಿತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಇದು ನನ್ನ ಗಮನಕ್ಕೆ ಬಂದಿಲ್ಲ. ಆದರೂ ಜನರು ಮನೆ ಮಠ ಕಳೆದುಕೊಂಡಾಗ ಜನರು ಸ್ವಲ್ಪ ಆಕ್ರೋಶಿತರಾಗಿರುತ್ತಾರೆ. ಅದು ಕಾನೂನು ಬಾಹಿರವಾದಾಗ ಈ ರೀತಿಯ ಘಟನೆ ನಡೆಯುತ್ತದೆ. ಆದರೆ ಯಾವುದೂ ಉದ್ದೇಶಪೂರ್ವಕವಾಗಿ ಇರುವುದಿಲ್ಲ. ಅನಿವಾರ್ಯವಾಗಿ ಪೊಲೀಸರು ಆ ರೀತಿ ನಡೆದುಕೊಂಡಿರಬಹುದು. ಏನಾದರೂ ಸರ್ಕಾರದ ವತಿಯಿಂದ ತಪ್ಪುಗಳಾದಲ್ಲಿ ಮತ್ತೆ ಅದು ಮರುಕಳಿಸದ ರೀತಿ ನೋಡಿಕೊಳ್ಳುತ್ತೇವೆ ಎಂದು ಸದಾನಂದ ಗೌಡರು ಹೇಳಿದ್ರು.