ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ಹೇರಲಾಗಿದ್ದು, ಇದನ್ನು ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಬಿಜೆಪಿ ಕಾರ್ಯಕರ್ತ ಬೆಳ್ಳಾರೆ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಆದರೆ ನಿಷೇಧದ ನಡುವೆ ಇಂದು ಉಡುಪಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದ ವೇಳೆ ಪ್ರಮೋದ್ ಮುತಾಲಿಕ್ ಅವರನ್ನು ಗಡಿಭಾಗವಾದ ಹೆಜಮಾಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ವಿಧಿಸಿರುವ ಆದೇಶ ತಿಳಿಸಿಮ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12 ಮಂದಿ ವಶಕ್ಕೆ: ಸುರತ್ಕಲ್ನಲ್ಲಿ ಗುರುವಾರ ದುಷ್ಕರ್ಮಿಗಳಿಂದ ಯುವಕ ಫಾಜಿಲ್ ಹತ್ಯೆ ಪ್ರಕರಣದ ಬಳಿಕ ನಿಷೇಧಾಜ್ಞೆ ಉಲ್ಲಂಘಿಸಿದ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸುರತ್ಕಲ್, ಬಜ್ಪೆ, ಮುಲ್ಕಿ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ.
ಈ ನಿಷೇಧಾಜ್ಞೆ ಉಲ್ಲಂಘಿಸಿ ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, 19 ಚೆಕ್ ಪೋಸ್ಟ್ಗಳ ಮೂಲಕ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎಡಿಜಿಪಿ ಪ್ರತಿಕ್ರಿಯೆ: ಯುವಕ ಫಾಜಿಲ್ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, "ಯುವಕನ ಅಂತ್ಯಕ್ರಿಯೆ ಮುಗಿದಿದೆ, ಸದ್ಯ ಪರಿಸ್ಥಿತಿ ಶಾಂತವಾಗಿದೆ. ಅಧಿಕಾರಿಗಳು ತನಿಖೆಯತ್ತ ಗಮನಹರಿಸಿದ್ದು, ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಅಪರಾಧದ ಉದ್ದೇಶಕ್ಕಾಗಿ ಬಳಸಿದ ವಾಹನವು ಮುಖ್ಯವಾಗಿದೆ. ಶೀಘ್ರದಲ್ಲೇ ಪ್ರಕರಣ ಭೇದಿಸುತ್ತೇವೆ. ಅಲ್ಲದೆ, ನಾಳೆ ಬೆಳಿಗ್ಗೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ಮುಂದೂಡುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು" ಎಂದರು.
"ಇತ್ತೀಚಿನ ದಿನಗಳಲ್ಲಿ ಇಂತಹ 2-3 ಕೊಲೆ ಪ್ರಕರಣಗಳು ನಡೆದಿವೆ. ಒಂದಕ್ಕೊಂದು ಲಿಂಕ್ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇನ್ನೂ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಕಾಮೆಂಟ್‌ಗಳನ್ನು ಮಾಡದಂತೆ ನಾನು ಸಲಹೆ ನೀಡುತ್ತೇನೆ. ವಾಸ್ತವಾಂಶದ ಆಧಾರದ ಮೇಲೆ ತನಿಖೆ ಮುಂದುವರೆಯುತ್ತದೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸುರತ್ಕಲ್: ಹುಟ್ಟೂರು ಮಂಗಳಪೇಟೆಯಲ್ಲಿ ಯುವಕ ಫಾಜಿಲ್ ಅಂತ್ಯಕ್ರಿಯೆ