ಚಿತ್ರದುರ್ಗ: 43 ಕೊರೊನಾ ಪಾಸಿಟಿವ್ ಸೋಂಕಿತರು ಗುಣಮುಖರಾದ ಬಳಿಕ ಕೋಟೆನಾಡು ಚಿತ್ರದುರ್ಗ ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿತು. ಆದರೆ ಇಂದು ಮತ್ತೆ ಎರಡು ಪ್ರಕರಣಗಳು ಕಾಣಿಸಿಕೊಂಡಿದ್ದು, ಮತ್ತೆ ಸೋಂಕು ಜಿಲ್ಲೆಗೆ ಕಾಲಿಟ್ಟಿದೆ.
ಕಳೆದ ಇಪ್ಪತ್ತು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಅದರೆ ಇಂದು ಹಿರಿಯೂರು ಪಟ್ಟಣದಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಹಿರಿಯೂರು ಪಟ್ಟಣದ ಆಝಾದ್ ನಗರದ ನಿವಾಸಿಯಾದ 29 ವರ್ಷದ ಮಹಿಳೆ ಮತ್ತು ಆಕೆಯ 08 ವರ್ಷದ ಮಗನಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಬೆಂಗಳೂರಿನ ಚಿಕ್ಕಪೇಟೆಯ ತನ್ನ ಅಣ್ಣನ ಮನೆಗೆ ತೆರಳಿದ ಹಿನ್ನೆಲೆ ಮಹಿಳೆ ಮತ್ತು ಮಗುವಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಇದೀಗ ಸೋಂಕಿತರನ್ನು ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ ಪಾಲಾಕ್ಷ ಅವರು ತಿಳಿಸಿದ್ದಾರೆ.