ಚಿತ್ರದುರ್ಗ: ಜಿಲ್ಲಾದ್ಯಂತ ಎರಡನೇ ಹಂತದ ಕೊರೊನಾ ಜನಸಾಮಾನ್ಯರಲ್ಲಿ ಜೀವ ಭಯ ಹುಟ್ಟಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮಸ್ಥರು ದೇವರ ಮೋರೆ ಹೋಗಿದ್ದಾರೆ.
ಗ್ರಾಮ ದೇವರಿಂದ ಸಿದ್ದಿಸಿದ ತೆಂಗಿನಕಾಯಿಯನ್ನು ಗ್ರಾಮದ ಸುತ್ತಲೂ ಕಟ್ಟುವ ಮೂಲಕ ಕೊರೊನಾದಿಂದ ರಕ್ಷಿಸುವಂತೆ ಭಗವಂತನ ಮೊರೆ ಹೋಗಿದ್ದಾರೆ. ತಳಕು ಹೋಬಳಿಯ ಮನ್ನೇಕೋಟೆ ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮನೆಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ, ಎರಡನೇ ಹಂತದ ಕೊರೊನಾ ವೈರಾಣು ಪ್ರಾರಂಭವಾದಾಗಿನಿಂದ ಇಂದಿನತನಕ ಸುಮಾರು 15ಕ್ಕೂ ಹೆಚ್ಚು ಜನರು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಾವುಗಳಿಂದ ಭಯಗೊಂಡ ಗ್ರಾಮಸ್ಥರು ಗ್ರಾಮ ದೇವತೆ ಮಾರಮ್ಮನ ಗುಡಿಯಿಂದ ಮಂತ್ರಿಸಿ ಸಿದ್ದಿಪಡಿಸಿ ಗ್ರಾಮದ ನಾಲ್ಕು ಮೂಲೆಗೆ ಕೆಂಪು ಬಟ್ಟೆಯಿಂದ ಕಾಯಿ ಕಟ್ಟಿದ್ದಾರೆ.
ಗ್ರಾಮದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 20ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಇದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವರ್ಷದಿಂದ ಕೊರೊನಾ ಕಂಟಕ ನಮ್ಮ ಬೆನ್ನಹಿಂದೆ ಇದ್ದು, ಇದರ ನಿಯಂತ್ರಣದಲ್ಲಿ ಸಾಕಷ್ಟು ಪರಿಶ್ರಮವಹಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೊರೊನಾ ನಿಯಂತ್ರಣವಾಗಿಲ್ಲ. ಆದ ಕಾರಣ ಗ್ರಾಮಸ್ಥರು ದೇವರ ಮೊರೆ ಹೋಗಿ ಸಿದ್ದಿಪಡಿಸಿದ ತೆಂಗಿನ ಕಾಯಿಯನ್ನು ಗ್ರಾಮದ ನಾಲ್ಕು ಭಾಗಕ್ಕೆ ಕಟ್ಟಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವುದು ಕುತೂಹಲಕಾರಿ ಸಂಗತಿ.
ಎರಡನೇ ಹಂತದ ಕೊರೊನಾ ಪ್ರಾರಂಭದ ಸಂದರ್ಭದಲ್ಲೇ ಬೆಂಗಳೂರಿನಿಂದ ತಮ್ಮ ತಮ್ಮ ಗ್ರಾಮಗಳ ಕಡೆಗೆ ಬಂದ ಜನರು ಮನ್ನೇಕೋಟೆ ಗ್ರಾಮಕ್ಕೂ ಸಹ ಆಗಮಿಸಿರುವುದು ಈ ರೋಗ ಹೆಚ್ಚಳಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಈಗಾಗಲೇ ಹಲವಾರು ಜನರು ಜ್ವರ, ಕೆಮ್ಮು, ನೆಗಡಿ, ಕೈಕಾಲು ನೋವು ಸೇರಿದಂತೆ ಹಲವಾರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ಸೇರುತ್ತಿದ್ದಾರೆ. ಗ್ರಾಮದಲ್ಲಿ ಎಲ್ಲಿ ನೋಡಿದರೂ ಕೊರೊನಾ ಭಯ ಆವರಿಸಿದೆ. ಇದರಿಂದ ಮುಕ್ತಿ ಪಡೆಯಲು ಆರೋಗ್ಯ ಇಲಾಖೆಗೆ ಕಡೆ ಗಮನಹರಿಸದೆ ದೇವರಿಗೆ ಮೊರೆ ಇಟ್ಟಿದ್ದಾರೆ. ಇದು ಮೂಢನಂಬಿಕೆಯಿಂದ ಪರಿಹಾರವಾಗುವ ರೋಗ ಅಲ್ಲ ಎಂಬುದು ಯುವಕರ ವಾದವಾಗಿದೆ.
ಇದನ್ನೂ ಓದಿ:ಶಿಕ್ಷಕರನ್ನೂ 'ಕೊರೊನಾ ವಾರಿಯರ್ಸ್' ಎಂದು ಪರಿಗಣಿಸಿ, 50 ಲಕ್ಷ ಪರಿಹಾರ ನೀಡಿ: ಹೆಚ್ಡಿಕೆ