ಚಿತ್ರದುರ್ಗ: ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಬೇಕು. ದೇಶದ ಭವಿಷ್ಯ ಉದ್ಯಮಶೀಲತೆಯಲ್ಲಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್‍ನ ಮಹಾಪ್ರಬಂಧಕ ಎಸ್.ಡಿ. ಬಿರಾದರ್ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ, ಕೆನರಾ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಣಕಾಸು ಸಾಕ್ಷರತಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ 'ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಬಗ್ಗೆ ಮಾಹಿತಿ ಶಿಬಿರ' ಉದ್ಘಾಟಿಸಿ ಅವರು ಮಾತನಾಡಿದ್ರು.
ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಹಣಕಾಸು ಸಾಕ್ಷರತೆ ಅತ್ಯವಶ್ಯಕವಾಗಿ ಬೇಕಾಗಿದೆ. ಸ್ವಯಂ ಉದ್ಯೋಗದಿಂದ ಹಲವರಿಗೆ ಉದ್ಯೋಗ ನೀಡುವ ಅವಕಾಶವಿದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಸ್ವಯಂ ಉದ್ಯೋಗದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.