ಚಿತ್ರದುರ್ಗ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದು, ಕೋಟೆನಾಡಿನಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಇದಕ್ಕೆ ಇಲ್ಲಿನ ಮಹಿಳಾ ಅಧಿಕಾರಿಗಳ ಶ್ರಮವೇ ಕಾರಣ ಎನ್ನಬಹುದು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಜಿ. ರಾಧಿಕಾ ಹಾಗೂ ಜಿಪಂ ಸಿಇಒ ಹೊನ್ನಂಬಾ ಅವರು ಕೊರೊನಾ ಜಿಲ್ಲೆಗೆ ಬಾರದಂತೆ ಜಿಲ್ಲಾ ಮಟ್ಟದಲ್ಲಿ ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ತಾಲೂಕಿನಲ್ಲೂ ತಹಶೀಲ್ದಾರ್, ತಾಪಂ ಸಿಇಒ, ಡಿಹೆಚ್ಒ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ರಚಿಸಿ ಪ್ರತಿದಿನದ ಬೆಳವಣಿಗೆಗಳ ಮೇಲೆ ಡಿಸಿ ನಿಗಾ ವಹಿಸಿದ್ದಾರೆ.
ಎಲ್ಲ ರಾಜ್ಯ, ಅಂತಾರಾಜ್ಯ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೊರ ಜಿಲ್ಲೆ, ಬೇರೆ ರಾಜ್ಯಗಳಿಂದ ಯಾರೂ ಕಾಲಿಡದಂತೆ ಭದ್ರತೆ ಒದಗಿಸಿದ್ದಾರೆ. ಹೋಂ ಕ್ವಾರಂಟೈನ್ನಲ್ಲಿರುವವರು ಮನೆಯಿಂದ ಹೊರಬಾರದಂತೆ ಪೊಲೀಸರು ಗಮನ ಹರಿಸಿದ್ದು, ಅವರ ಕಾರ್ಯಕ್ಷಮತೆಯಿಂದ ಕೊರೊನಾ ಜಿಲ್ಲೆಗೆ ಕಾಲಿಟ್ಟಿಲ್ಲ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.
ಈಗಾಗಲೇ ಒಟ್ಟು 411 ಜನರ ಪೈಕಿ 337 ಜನರ ವರದಿ ನೆಗೆಟಿವ್ ಬಂದಿದ್ದು, 56 ಜನರ ವರದಿ ವೈದ್ಯರ ಕೈ ಸೇರಬೇಕಿದೆ. ಜಿಲ್ಲೆಯ ಭೀಮಸಮುದ್ರದಲ್ಲಿ ಪತ್ತೆಯಾಗಿದ್ದ ಒಂದು ಕೊರೊನಾ ಪ್ರಕರಣವನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು, ಕೊರೊನಾ ಸೋಂಕಿತ ಮಹಿಳೆ ಈಗಾಗಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನು ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ ಮಹಿಳಾ ಅಧಿಕಾರಿಗಳ ಪರ ಪ್ರಶಂಸೆ ವ್ಯಕ್ತವಾಗುತ್ತಿದೆ.