ಚಿತ್ರದುರ್ಗ: ನರೇಗಾ ಕೆಲಸಕ್ಕೆ ಎಂಎಸ್ಸಿ ವಿದ್ಯಾರ್ಥಿನಿಯೊಬ್ಬರು ಹಾಜರ್ ಆಗಿದ್ದರಿಂದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಶಹಬ್ಬಾಸ್ಗಿರಿಗೆ ಕಾರಣವಾಯಿತು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂಜನಾಪುರ ಗ್ರಾಮದ ದೀಪಾ ಶ್ರೀ, ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದು, ತಮ್ಮ ತಂದೆ ತಾಯಿಯೊಂದಿಗೆ ತಾಲೂಕಿನ ಒನಕೆ ಮರಡಿ ಕಾವಲ್ ಪ್ರದೇಶದ ಸರ್ಕಾರಿ ಜಮೀನಿನ ಬದು ನಿರ್ಮಾಣ ಕಾಮಗಾರಿ ಕೆಲಸದಲ್ಲಿ ನಿರತಳಾಗಿದ್ದಳು. ಅದೇ ವೇಳೆ, ಕಳೆದ ದಿನ ಕಾಮಗಾರಿ ವೀಕ್ಷಣೆಗೆ ತೆರಳಿದ ಸಚಿವ ಕೆಎಸ್ ಈಶ್ವರಪ್ಪ ಎಂಎಸ್ಸಿ ವಿದ್ಯಾರ್ಥಿನಿ ದೀಪಾಶ್ರೀ ಕೆಲಸ ಮಾಡುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ, ಸ್ನಾತಕೋತ್ತರ ಪದವಿ ಮುಗಿದ ನಂತರ ಒಳ್ಳೆಯ ಕೆಲಸ ಕೊಡಿಸುವ ಭರವಸೆ ನೀಡಿದರು.
ದೀಪಾ ಶ್ರೀ ಪ್ರಸ್ತುತವಾಗಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಉಪನ್ಯಾಸಕಿಯಾಗುವ ಗುರಿ ಹೊಂದಿರುವ ವಿದ್ಯಾರ್ಥಿನಿ ದೀಪಾ ಶ್ರೀ ತನ್ನ ತಂದೆ - ತಾಯಿಯೊಂದಿಗೆ ನಿತ್ಯ ಬದು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಳೆ. ಇನ್ನು ವಿದ್ಯಾರ್ಥಿ ದೀಪಾ ಶ್ರೀಯನ್ನು ಸಚಿವರು ಕೇಳಿದರೆ, ಕೊರೊನಾ ಸಂಕಷ್ಟದಲ್ಲಿ ತಂದೆ - ತಾಯಿಗೆ ನೆರವಾಗುವ ಉದ್ದೇಶದಿಂದ ನರೇಗಾ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಇನ್ನು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿದ್ಯಾರ್ಥಿ ದೀಪಾ ಶ್ರೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪದವಿ ಮುಗಿದಾದ ಬಳಿಕ ತಿಳಿಸಿ ಯಾವುದಾದರೂ ಒಂದು ಉದ್ಯೋಗ ಕೊಡಿಸುತ್ತೇವೆ ಎಂದು ಸಿಇಒ ಯೋಗೀಶ್ ಅವರಿಗೆ ತಿಳಿಸಿದರು.