ಚಿತ್ರದುರ್ಗ: ಕೋಟೆನಾಡಿನ ಸಾರ್ವಜನಿಕ ಗೋಡೆ, ಸೇತುವೆಗಳ ಗೋಡೆಗಳಲ್ಲಿ ಹೆಚ್ಚಾಗಿ ಜಾಹಿರಾತುಗಳೇ ಕಂಡು ಬರುತ್ತಿದ್ದವು. ಇತ್ತ ಕೆಲವು ಜನರು ತಂಬಾಕು ಸೇವನೆ ಮಾಡಿ ಬ್ರಿಡ್ಜ್ನ ಗೋಡೆಗೆ ಉಗಿಯುವುದು ಸೇರಿದಂತೆ ಗೋಡೆ ಪಕ್ಕದಲ್ಲಿ ಕಸ ಚೆಲ್ಲುವ ಕೆಲಸಕ್ಕೆ ಮುಂದಾಗುತ್ತಿದ್ದರು.ಆದರೀಗ ಇವೆಲ್ಲಕ್ಕೂ ಫುಲ್ಸ್ಟಾಪ್ ಇಡುವ ಕಾಲ ಬಂದಿದೆ.
ನಗರಸಭೆ ಅಧಿಕಾರಿಗಳ ವಿನೂತನ ಪ್ರಯತ್ನದ ಫಲವಾಗಿ ನಗರದ ಗೋಡೆಗಳ ಸೌಂದರ್ಯ ಹೆಚ್ಚಾಗುತ್ತಿದೆ. ಪ್ರತಿ ಗೋಡೆಗಳು ಜಿಲ್ಲೆಯ ಇತಿಹಾಸ ಹೇಳುವ ಗಾಳಿ ಗೋಪುರ, ಒಂಟಿಕಲ್ಲು ಬಸವಣ್ಣ, ದೇವಾಲಯ, ಸ್ಮಾರಕ, ಕೋಟೆ, ವಾಣಿವಿಲಾಸ ಸಾಗರ, ವೀರವನಿತೆ ಓಬವ್ವನ ಕಾಲದ ಬೆಟ್ಟಗಳು ಸೇರಿದಂತೆ ಹಲವು ಇತಿಹಾಸ ಪ್ರವಾಸಿ ತಾಣಗಳನ್ನು ಪರಿಚಯಿಸುತ್ತಿವೆ. ಪ್ರವಾಸಿ ತಾಣಗಳು ಜನರಿಗೆ ಗೊತ್ತಾಗಲಿ ಎಂದು ಗೋಡೆ ಮೇಲೆ ಪೇಂಟಿಂಗ್ ಮಾಡಿಸಲಾಗುತ್ತಿದೆ. ಹೀಗಾಗಿ ನಗರಕ್ಕೆ ಯಾರೇ ಎಂಟ್ರಿ ಕೊಟ್ಟರೂ ಚಿತ್ರ ಕಲೆ ನೋಡಿಕೊಂಡು ಹೋಗುವುದಲ್ಲದೇ. ಗೋಡೆ ನೋಡಿದ ಜನರು ವಾವ್ ಎನ್ನುತ್ತಿದ್ದಾರೆ.
ಗೋಡೆಗಳ ಅಂದವಾಗಿಡಲು ಹೊಸ ಪ್ರಯತ್ನ: ನಗರದ ರಸ್ತೆ ಸೇತುವೆಗಳ ಗೋಡೆಗಳಲ್ಲಿ ಬಹುತೇಕ ಜಾಹೀರಾತು ಪೋಸ್ಟರ್ಗಳು ತುಂಬಿದ್ದರೆ, ಸೇತುವೆಯ ಕೆಳಭಾಗದಲ್ಲಿ ಕಸದರಾಶಿ ಕಾಣುತ್ತಿತ್ತು. ಇವೆಲ್ಲವುಗಳಿಗೆ ಮುಕ್ತಿ ನೀಡಲು ನಗರಸಭೆ ಗೋಡೆಗಳ ಮೇಲೆ ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರ ಬಿಡಿಸಲು ಪ್ರೋತ್ಸಾಹಿಸುತ್ತಿದೆ.
ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಉದ್ಯೋಗ: ಕಳೆದ 9 ತಿಂಗಳಿಂದ ಚಿತ್ರಕಲಾವಿದರು ದುಡಿಮೆಗಾಗಿ ಹವಣಿಸುತ್ತಿದ್ದರು. ಜಿಲ್ಲೆಯ ಅನೇಕ ಚಿತ್ರಕಲಾವಿದರು ಉದ್ಯೋಗಕ್ಕಾಗಿ ಪರದಾಟ ಕೂಡ ನಡೆಸುತ್ತಿದ್ದರು. ಇವೆಲ್ಲವುಗಳನ್ನು ಮನಗಂಡ ನಗರಸಭೆ ಅಧಿಕಾರಿಗಳು ಗೋಡೆಯ ಅಂದ ಹೆಚ್ಚಿಸುವುದರ ಜೊತೆಗೆ, ಹತ್ತಕ್ಕೂ ಅಧಿಕ ಕಲಾವಿದರಿಗೆ ಉದ್ಯೋಗ ನೀಡಿದೆ. ಚಿತ್ರ ಬರವಣಿಗೆಯಲ್ಲಿ ತೊಡಗಿದ ಕಲಾವಿದರು ಮಂದಹಾಸ ಬೀರುವಂತಾಗಿದೆ. ಕೈಚಳಕದ ಮೂಲಕ ಸೇತುವೆಗಳ ಗೋಡೆಗಳು ದುರ್ಗದ ಕೋಟೆ, ಸ್ಮಾರಕಗಳಾಗಿ ಪರಿವರ್ತನೆಗೊಳ್ಳುತ್ತಿವೆ.
ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಚಿತ್ರ ಬರವಣಿಗೆ ಬಳಿಕ ಗೋಡೆಗಳ ಅಂದ ಕಾಪಾಡಿಕೊಳ್ಳಲು ಅಧಿಕಾರಿಗಳು ಕಾಳಜಿ ವಹಿಸುವಂತೆ ನಗರಸಭೆಗೆ ಸಲಹೆ ನೀಡಿದ್ದಾರೆ.