ಚಿತ್ರದುರ್ಗ: ನಗರದಲ್ಲಿ ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರಗಳು ಪತ್ತೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ನಗರದ ಜಿಲ್ಲಾ ಕಾರಾಗೃಹ ರಸ್ತೆಯಲ್ಲಿರುವ ಮನೆಯು ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದು, ನಿಗೂಢ ರೀತಿಯಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮನೆಯಲ್ಲಿ ಈ ಹಿಂದೆ ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ (80) ಕುಟುಂಬವು ವಾಸಿಸುತ್ತಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ. ಜಗನ್ನಾಥ ರೆಡ್ಡಿ ಅವರು ತುಮಕೂರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಎಕ್ಸೆಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿ ಬಳಿಕ ಚಿತ್ರದುರ್ಗದಲ್ಲಿಯೇ ವಾಸವಿದ್ದರು ಎಂದು ಗೊತ್ತಾಗಿದೆ.
ಮನೆಯಲ್ಲಿ ನಿಗೂಢವಾಗಿ ಅಸ್ಥಿಪಂಜರಗಳು ಪತ್ತೆಯಾದ ಕುರಿತು ಜಗನ್ನಾಥ ರೆಡ್ಡಿ ಅವರ ಸಂಬಂಧಿ ಪವನ್ ಕುಮಾರ್ ಎಂಬುವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿ ಜಗನ್ನಾಥ ರೆಡ್ಡಿ ಮತ್ತು ಅವರ ಕುಟುಂಬ ಆ ಮನೆಯಲ್ಲಿ ವಾಸವಾಗಿದ್ದರು. ಇದೀಗ ಅಲ್ಲಿ 5 ಅಸ್ಥಿಪಂಜರಗಳು ಪತ್ತೆ ಆಗಿವೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಆ ಮನೆಯಲ್ಲಿ ವಾಸವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಕೆಲ ಕಾರಣಗಳಿಂದ ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ. ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಅವರ ಕುಟುಂಬದವರೂ ಸಹ ಕಂಡಿರಲಿಲ್ಲ. ಆ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರಗಳು ಅವರದ್ದೇ ಆಗಿರಬಹುದು ಎಂಬ ಬಗ್ಗೆಯೂ ಅನುಮಾನವಿದೆ. 3 ವರ್ಷಗಳ ಹಿಂದೆಯೇ ಅವರು ಮನೆಯಲ್ಲಿಯೇ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಅನುಮಾನ ಮೂಡಿದೆ ಎಂದು ಸಂಬಂಧಿ ಪವನ್ ಕುಮಾರ್ ದೂರು ದಾಖಲಿಸಿದ್ದಾರೆ.
ಪೂರ್ವ ವಲಯ ಐಜಿಪಿ ಹೇಳಿದ್ದೇನು?: ಸುದ್ದಿ ತಿಳಿಯುತ್ತಿದ್ದಂತೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇವರ ಜೊತೆ ಎಸ್ಪಿ ಧರ್ಮೆಂದರ್ ಕುಮಾರ್ ಮೀನಾ ಅವರು ಸಹ ಭೇಟಿ ನೀಡಿದ್ದರು. ಬಳಿಕ ಅಸ್ಥಿಪಂಜರ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿದ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಮನೆಯಲ್ಲಿ ತುಂಬಾ ವಾಸನೆ ಬರುತ್ತಿದೆ. FSL ತಂಡ ಪರಿಶೀಲನೆ ಕೈಗೊಂಡಿದೆ. ವೈದ್ಯರು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸದ್ಯ ಮನೆಯಲ್ಲಿ ಐದು ಅಸ್ಥಿಪಂಜರಗಳು ಸಿಕ್ಕಿವೆ. ಪ್ರಕರಣದ ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.
ಈ ಘಟನೆ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರ ಅಸ್ಥಿಪಂಜರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಸದ್ಯ ಪೊಲೀಸರು ಆ ಅಸ್ಥಿಪಂಜರಗಳು ಯಾರವು, ಯಾವ ರೀತಿ ಸಾವನ್ನಪ್ಪಿದ್ದಾರೆ ಎಂಬಿತ್ಯಾದಿ ವಿಷಯಗಳ ಕುರಿತು ತನಿಖೆ ನಡೆಸಲಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.