ಚಿತ್ರದುರ್ಗ: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮಿಶ್ರ ಸರ್ಕಾರದ ಆಡಳಿತಾವಧಿ ವೇಳೆ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ರೈತರ ಬಗ್ಗೆ ಕೃಷಿ ಇಲಾಖೆ ನಿರ್ಲಕ್ಷ್ಯ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿ.ಸಿ. ಪಾಟೀಲ್ ಅವರು, ಡಿಕೆಶಿ ಇಂತಹ ಸಮಯದಲ್ಲಿ ರಾಜಕೀಯ ಮಾಡೋದು ದುರ್ದೈವದ ಸಂಗತಿ. ಈಗ ನಮ್ಮದೇನಿದ್ದರೂ ಕೊರೊನಾ ವಿರುದ್ಧ ಹೋರಾಟ. ಕರ್ನಾಟಕ ಸರ್ಕಾರ ಬೇರೆ ರಾಜ್ಯಗಳಿಗಿಂತ ಅತ್ಯಂತ ಸಮರ್ಥವಾಗಿ ಮಹಾಮಾರಿ ಸೋಂಕನ್ನು ನಿಯಂತ್ರಿಸುತ್ತಿದೆ. ಹೀಗಾಗಿ ಪ್ರತಿಪಕ್ಷದವರಿಗೆ ಮಾಡಲು ಬೇರೆ ಕೆಲಸಗಳು ಇಲ್ಲದ್ದಕ್ಕೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಕೇಂದ್ರ, ರಾಜ್ಯ ಸರ್ಕಾರಗಳಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಜನರಿಗೆ ಉಚಿತ ಹಾಲು ವಿತರಣೆ ಮಾಡಿ, ರೈತರಿಗೆ ಮುಕ್ತ ಮಾರುಕಟ್ಟೆ ರೂಪಿಸಲಾಗಿದೆ. ಕೃಷಿ ಚಟುವಟಿಕೆ ಯಾವುದೇ ನಿರ್ಬಂಧವಿಲ್ಲದೆ ನಿರಾತಂಕವಾಗಿ ನಡೆದಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.