ಚಿತ್ರದುರ್ಗ: ಕೊರೊನಾ ಹಿನ್ನೆಲೆ ಈ ಬಾರಿಯ ಹಿಂದೂ ಮಹಾಗಣಪತಿಯ ನಿಮಜ್ಜನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸಮಿತಿ ನಿರ್ಧರಿಸಿದೆ. ಸೆ.12ರಂದು ಹಿಂದೂ ಮಹಾಗಣಪತಿ ನಿಮಜ್ಜನ ನಡೆಯಲಿದೆ.
ರಾಜ್ಯ ಸರ್ಕಾರ ಕೊರೊನಾ ಮಾರ್ಗಸೂಚಿ ಹೊರಡಿಸಿರುವುದರಿಂದ ಹಿಂದೂ ಮಹಾಗಣಪತಿ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶೋಭಾಯಾತ್ರೆ ಬದಲಾಗಿ 100 ಮಾತ್ರ ಸೇರುವುದು, ಸರಳವಾಗಿ ನಾದಸ್ವರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು ಯಾವುದೇ ಡೊಳ್ಳು ಕುಣಿತ, ಮೆರವಣಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಣಪತಿ ಸಾಗುವ ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಂದ್ರವಳ್ಳಿಯಲ್ಲೇ ನಿಮಜ್ಜನ ಮಾಡಲು ನಿರ್ಧರಿಸಿದ್ದೇವೆ ಎಂದರು. ಈ ಯಾತ್ರೆಯಲ್ಲಿ ಕಾರ್ಯಕರ್ತರು ಹಾಗೂ ಸಮಿತಿಯವರು ಪಾಲ್ಗೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸೆ. 12ರಂದು ಮಧ್ಯಾಹ್ನ 03ಗಂಟೆಗೆ ಯಾತ್ರೆ ಆರಂಭವಾಗಲಿದೆ ಎಂದು ಬದ್ರಿನಾಥ್ ಮಾಹಿತಿ ನೀಡಿದರು.