ಚಿತ್ರದುರ್ಗ: ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡದಿರಲು ನಿರ್ಧರಿಸಲಾಗಿದೆ. ಕೊರೊನಾ ಪಾಸಿಟಿವ್ ಪತ್ತೆಯಾದ ಭಾಗದಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ ಸೋಮಣ್ಣ ತಿಳಿಸಿದರು.
ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಈಗಾಗಲೇ ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಐದಾರು ಕಡೆ ಗೊಂದಲ ಆಗಿದೆ. ಹೀಗಾಗಿ ಅಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರ ಬೆಡ್, ನೂರು ಆ್ಯಂಬುಲೆನ್ಸ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಂತರ ಮಾತನಾಡಿದ ಅವರು, ಸಚಿವ ಸುಧಾಕರ್ ಕ್ವಾರಂಟೈನ್ ಆಗಿದ್ದರಿಂದ 3 ದಿನ ಸ್ವಲ್ಪ ತೊಂದರೆ ಆಯ್ತು. ಬೆಂಗಳೂರು ಹೊರತು ಪಡಿಸಿ ಬೇರೆಲ್ಲೂ ಆ ರೀತಿಯ ಸಮಸ್ಯೆ ಇಲ್ಲ, ಬೆಂಗಳೂರಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ತಿಳಿಸಿದರು.
1 ವರ್ಷದಲ್ಲಿ 5.40 ಲಕ್ಷ ಅರ್ಹ ಕುಟುಂಬಗಳಿಗೆ ಗೃಹ ಸೌಲಭ್ಯವನ್ನು ಸರ್ಕಾರ ಒದಗಿಸಲು ಮುಂದಾಗಿದೆ. ಈ ಹಿಂದೆ ಅಕ್ರಮವಾಗಿ ಮನೆಗಳನ್ನು ತಿಂದು ತೇಗಿದವರಿದ್ದಾರೆ, ಅಂಥದಕ್ಕೆ ಕಡಿವಾಣ ಹಾಕಬೇಕಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕು ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.