ಚಿತ್ರದುರ್ಗ: ನರೇಗಾ ಯೋಜನೆಯಡಿ ನಡೆದ ಅವ್ಯವಹಾರವನ್ನು ಪ್ರಶ್ನಿಸಿದ ಗ್ರಾಮ ಪಂಚಾಯಿತಿ ಸದಸ್ಯನ ಸದಸ್ಯತ್ವ ರದ್ದುಪಡಿಸುವುದಾಗಿ ತಾಲೂಕು ಪಂಚಾಯಿತಿ ಸಿಇಒ ಆವಾಜ್ ಹಾಕಿದ ಘಟನೆ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ನಡೆದಿದೆ.
ಬದು ನಿರ್ಮಾಣದಲ್ಲಿ ಅವ್ಯವಹಾರ ನಡೆಸಲಾಗಿದ್ದು, ನರೇಗಾ ಯೋಜನೆ ಕಾಮಗಾರಿಯಲ್ಲಿ ಅಕ್ರಮ ನಡೆಸಿ ಫಲಾನುಭವಿ ರೈತರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕು ಪಂಚಾಯತ್ ಸಿಇಒ ಪ್ರಕಾಶ ಅವರನ್ನು ದೇವಸಮುದ್ರ ಗ್ರಾಮ ಪಂಚಾಯತ್ ಸದಸ್ಯ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಬದು ನಿರ್ಮಾಣದ ಹೆಸರಿನಲ್ಲಿ ಪ್ರತಿ ರೈತರ ಖಾತೆಗೆ 3,000 ಸರ್ಕಾರದ ಹಣ ನೀಡಬೇಕಿತ್ತಂತೆ. ಅಲ್ಲದೇ ತಾಲೂಕಿನ 16 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಕಾಮಗಾರಿ ಮುಕ್ತಾಯವಾದರೂ ಸಹ ಸರ್ಕಾರದ ಹಣ ಫಲಾನುಭವಿಗಳಿಗೆ ಸೇರದ ಕಾರಣ ತಾಲೂಕು ಪಂಚಾಯಿತಿ ಅಧಿಕಾರಿಯನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಗ್ರಾ.ಪಂ. ಸದಸ್ಯನಿಗೆ ನಿನ್ನ ಸದಸ್ಯತ್ವ ರದ್ದು ರದ್ದುಪಡಿಸಿ, ಕೇಸ್ ಹಾಕುವುದಾಗಿ ತಾಲೂಕು ಪಂಚಾಯಿತಿ ಅಧಿಕಾರಿ ಆವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ ಅವರಿಗೆ ಬೆದರಿಕೆ ಹಾಕಿರುವುದನ್ನು ಗ್ರಾಮಸ್ಥರು ವಿಡಿಯೋ ಮಾಡಿಕೊಂಡಿದ್ದಾರೆ.
ಇನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವರ್ತನೆಗೆ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದು, ನರೇಗಾ ಯೋಜನೆ ಕಾಮಗಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ರೈತರಿಗೆ ಪಂಗನಾಮ ಹಾಕಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.