ಚಿತ್ರದುರ್ಗ: ಜನರು ಲಾಕ್‌ಡೌನ್ ಉಲ್ಲಂಘಿಸಿ ಓಡಾಡುತ್ತಿರುವುದಕ್ಕೆ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಜನರಿಗೆ ಜಾಗೃತಿ ಸಂದೇಶ ನೀಡಿದ್ದಾರೆ. ಕೊರೊನಾ ವೈರಸ್ ಮನುಕುಲ ನಾಶಪಡಿಸುವ ಮಹಾಮಾರಿ. ಸಾವು-ನೋವಿನ ದೃಶ್ಯ ನೋಡಿಯೂ ಜನ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿ ಓಡಾಡುವುದು ಅಕ್ಷಮ್ಯ ಅಪರಾಧ. ಮನೆಯವರಿಗೆ, ನೆರೆಹೊರೆಯವರಿಗೆ ನೀವೇ ಮಹಾಮಾರಿ ಆಗುತ್ತೀರಿ ಎಂದು ಎಚ್ಚರಿಸಿದರು.
ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳಬಹುದೇ ಯೋಚಿಸಿರಿ, ಪೇಟೆ ಪಟ್ಟಣದಲ್ಲಿ ಆಗುತ್ತಿರುವ ಸಾವು-ನೋವು ಸುದೈವದಿಂದ ಹಳ್ಳಿಗೆ ವ್ಯಾಪಿಸಿಲ್ಲ. ನಿಮ್ಮ ಬೇಜವಾಬ್ದಾರಿಯಿಂದ ಹಳ್ಳಿಗೆ ಹರಡಿದರೆ ಹಳ್ಳಿಗಳು ಸ್ಮಶಾನ ಆಗಲಿವೆ. ಪಾಶ್ಚಾತ್ಯದಂತೆ ನಮ್ಮ ದೇಶದಲ್ಲಿ ಅನಾಹುತ ಆಗಿಲ್ಲ. ನಮಗೆ ಏನೂ ಆಗಲ್ಲ ಎಂಬ ಒಣ ಜಂಭವೂ ಬೇಡ ಎಂದರು.
ಕೇಂದ್ರ, ರಾಜ್ಯ ಸರ್ಕಾರದ ಆದೇಶ ಚಾಚೂ ತಪ್ಪದೆ ಪಾಲಿಸಿ. ಎಲ್ಲವೂ ಸರ್ಕಾರವೇ ಮಾಡಲು ಆಗುವುದಿಲ್ಲ. ಸ್ವಯಂ ನಿಯಂತ್ರಣ ಅಗತ್ಯ, ಮನೆಯಲ್ಲೇ ಇರಿ, ಮನೆ ದೀಪ ಬೆಳಗಿಸಿ. ನೀವು ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದೀರಿ, ರಾತ್ರಿ ದೀಪ ಬೆಳಗಿಸಿ ಬೆಳಗ್ಗೆ ಅಡ್ಡಾದಿಡ್ಡಿ ತಿರುಗಾಡುವ ಪಾಪ ಕೃತ್ಯ ಮಾಡಬೇಡಿ. ನೀವೂ ಬದುಕಿ, ಬೇರೆಯವರು ಬದುಕಲು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.