ಚಿತ್ರದುರ್ಗ: ರಾಜ್ಯದಲ್ಲಿ ಖ್ಯಾತಿಗಳಿಸಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಗಣೇಶೋತ್ಸವದ ಮೇಲೆ ಕೊರೊನಾ ಮಹಾಮಾರಿಯ ಕರಿ ನೆರಳು ಅವರಿಸಿದೆ. ಕೊರೊನಾ ಸೋಂಕಿನ ಭೀತಿಯ ಪರಿಣಾಮ ವಿಜೃಂಭಣೆಯಿಂದ ನಡೆಯುತ್ತಿದ್ಧ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಚಿತ್ರದುರ್ಗ ನಗರದ ಮುಖ್ಯರಸ್ತೆಗಳಲ್ಲಿ ತೆರಳಿದ ಶೋಭಾಯಾತ್ರೆಯಲ್ಲಿ ಪ್ರತಿವರ್ಷ ಇರುತ್ತಿದ್ದಷ್ಟು ಜನಸಾಗರ ಕಾಣಲಿಲ್ಲ.
ಪೊಲೀಸರು ಜನರು ಬರದಂತೆ ತಡೆ ಮಾಡಿದ್ದು ಹಾಗೂ ಕೊರೊನಾದಿಂದಾಗಿ ಯುವಕ ಯುವತಿಯರು ಈ ಬಾರಿ ಹಿಂದು ಮಹಾಗಣಪತಿ ನಿಮ್ಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿರುವುದು ಪ್ರಮುಖ ಕಾರಣ ಕೂಡ ಆಗಿದೆ ಎನ್ನುತ್ತಾರೆ ಸ್ಥಳೀಯರು.
ಪ್ರತಿ ವರ್ಷ ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿದ್ದ ಶೋಭಯಾತ್ರೆ ಕೊರೊನಾದಿಂದ ಇಂದು ಸಂಜೆ 3 ಗಂಟೆಗೆ ಆರಂಭವಾಯಿತು. ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಸುಮಾರು 100 ಜನ ಕಾರ್ಯಕರ್ತರು ಗಣೇಶೋತ್ಸವದಲ್ಲಿ ಸಾಂಕೇತಿಕವಾಗಿ ಭಾಗಿಯಾಗಿ ರಾಮ ಸ್ಮರಣೆ ಮಾಡುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಗೆ ಮುನ್ನ ಭಗೀರಥ ಶ್ರೀ, ಮಾದರಾ ಚನ್ನಯ್ಯ ಶ್ರೀ, ಸೇವಾಲಾಲ್ ಶ್ರೀ, ವಿದ್ಯಾರಣ್ಯ ಶ್ರೀ ಸೇರಿದಂತೆ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ಶೋಭಯಾತ್ರೆಗೆ ಹಸಿರು ನಿಶಾನೆ ತೋರಿದರು.
ಒಟ್ಟಾರೆ, ರಾಜ್ಯದಲ್ಲೇ ಖ್ಯಾತಿ ಗಳಿಸಿದ್ದ ಹಿಂದೂ ಮಹಾಗಣಪತಿ್ಯ ಅದ್ಧೂರಿ ಗಣೇಶೋತ್ಸವ ಹಾಗು ಶೋಭಾಯಾತ್ರೆಗೆ ಕೊರೊನಾ ಮಾಹಾಮಾರಿ ಬ್ರೇಕ್ ಹಾಕಿದೆ. ಈ ಬಾರಿ ಸರಳತೆಯಿಂದ ಸಾಂಕೇತಿಕವಾಗಿ ಶೋಭಾಯಾತ್ರೆ ಆಚರಣೆಯಾಗಿದ್ದಕ್ಕೆ ಯುವಜನತೆಯಲ್ಲಿ ನಿರಾಸೆ ಸೃಷ್ಟಿಯಾಗಿರುವುದಂತು ಸುಳ್ಳಲ್ಲ.