ಚಿತ್ರದುರ್ಗ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಗಂಟಯ್ಯನದೊಡ್ಡಿ ಗ್ರಾಮದಲ್ಲಿ ಓರ್ವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಗ್ರಾಮಗಳಿಗೆ ಜಿಲ್ಲೆಯ ಯಾವ ವ್ಯಕ್ತಿಗಳೂ ಭೇಟಿ ನೀಡದಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಜಾಜೂರು ಗ್ರಾಮದಿಂದ ಕೇವಲ 4 ಕಿ.ಮೀ. ಹಾಗೂ ಮಜುರೆ ದೊಡ್ಡೋಬಯ್ಯನಹಟ್ಟಿ ಗ್ರಾಮದಿಂದ ಕೇವಲ 1 ಕಿ.ಮೀ. ದೂರದಲ್ಲಿರುವ ಆಂಧ್ರ ಪ್ರದೇಶದ ಶೆಟ್ಟೂರು ಮಂಡಲ ವ್ಯಾಪ್ತಿಗೆ ಬರುವ ಗಂಟಯ್ಯನದೊಡ್ಡಿ ಗ್ರಾಮದಲ್ಲಿ ಒಂದು ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಹೀಗಾಗಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಶೆಟ್ಟೂರು, ಮಣಿರೇವು, ಅನಂತಪುರ, ಅಯ್ಯಗಾರಪಲ್ಲಿ, ಕಮ್ಮತನಹಳ್ಳಿ, ಬಚ್ಚುಪಲ್ಲಿ, ಕೈರೇವು ಗ್ರಾಮಗಳು, ಮಾಕೋಡಿ ತಾಂಡಾ ಅಲ್ಲದೆ ಇತರೆ ಗಡಿ ಭಾಗದ ಗ್ರಾಮಗಳಲ್ಲಿ ವಾಸವಿರುವ ಸಾರ್ವಜನಿಕರನ್ನು ಅಥವಾ ಸಂಬಂಧಿಕರನ್ನು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿರುವ ಹಳ್ಳಿಗಳ ಜನರು ಭೇಟಿ ಮಾಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.