ಚಿತ್ರದುರ್ಗ: ಜನ ಸೇವೆಯ ಹೆಸರಿನಲ್ಲಿ ಅಕ್ರಮವಾಗಿ 250 ಆಕ್ಸಿಜನ್ ಸಿಲಿಂಡರ್ ಸಂಗ್ರಹಣೆ ಮಾಡಿರುವುದು ಪತ್ತೆಯಾಗಿದ್ದು, ಜಿಲ್ಲಾ ಮತ್ತು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿವೆ ಎಂಬ ಆರೋಪ ಕೇಳಿ ಬಂದಿದೆ.
ಪ್ರವೀಣ್ ಚಂದ್ರ ಅವರ ಮೇ ಪ್ರಕಾಶ್ ಸ್ಪಾಂಜ್ ಐರನ್ ಪ್ರೈ.ಲಿ. ಹೆಗ್ಗೆರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಇವರಿಗೆ ಸಂಬಂಧಿಸಿದ ಕಾರ್ಖಾನೆಯ ಬಳಿ ಕೃಷಿ ಜಮೀನಿನ ಹಳ್ಳದಲ್ಲಿ ಸುಮಾರು 250 ಆಕ್ಸಿಜನ್ ಸಿಲಿಂಡರ್ ಪತ್ತೆಯಾಗಿವೆ.
ಜಿಲ್ಲಾ ಮತ್ತು ತಾಲೂಕು ಆಡಳಿತ ಸಣ್ಣ ಉದ್ದಿಮೆದಾರರನ್ನೊಳಗೊಂಡಂತೆ ಎಲ್ಲರ ಬಳಿ ಇರುವ ಆಕ್ಸಿಜನ್ ಸಿಲಿಂಡರ್ ಸ್ವಾಧೀನಕ್ಕೆ ಪಡೆದು ಕೋವಿಡ್-19 ರೋಗಿಗಳ ಜೀವ ಉಳಿಸಲು ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಬೇಡಿಕೆ ಮತ್ತು ಅಭಾವ ಇರುವಂತಹ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಗೇ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಷ್ಟು ದೊಡ್ಡ ಪ್ರಮಾಣದ ಆಕ್ಸಿಜನ್ ಸಿಲಿಂಡರ್ ಹೇಗೆ ಕೃಷಿ ಜಮೀನಿನ ಹಳ್ಳಕ್ಕೆ ಬಂದವು?, ಯಾರು ಇಲ್ಲಿ ಸಂಗ್ರಹಿಸಿದರು?, ಸಾಕಷ್ಟು ರೋಗಿಗಳು ಆಕ್ಸಿಜನ್ ಇಲ್ಲದೆ ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯ ಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು.
ಜನ ಸೇವೆಯ ಹೆಸರಿನಲ್ಲಿ ಅಥವಾ ಲಾಬಿ ಮಾಡಲು ಸಂಗ್ರಹಮಾಡಲಾಗಿದೆಯೆ?, ಸೂಕ್ತ ದಾಖಲೆಗಳನ್ನ ಕೂಲಂಕಶವಾಗಿ ಪರಿಶೀಲಿಸುವಂತೆ ತಾಲೂಕು ಆಡಳಿತದ ಸ್ವಾಧೀನಕ್ಕೆ ಪಡೆದು ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಕೆ.ಜಗದೀಶ ಕಂದಿಕೆರೆ ಆಗ್ರಹಿಸಿದ್ದಾರೆ.
ಓದಿ: ವಿಚಿತ್ರ ಕಾಯಿಲೆ... ಮಗನಿಗಾಗಿ ಎರಡು ಬಾರಿ 300 ಕಿ.ಮೀ. ಸೈಕಲ್ ತುಳಿದ ತಂದೆ!