ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ, ನನಗೆ ಚಪ್ಪಲಿಯಲ್ಲಿ ಹೊಡೆದರು. ಎಲ್ಲರ ಕೈಯಲ್ಲೂ ದೊಣ್ಣೆ ಇತ್ತು.ಜನರು ಕಳ್ಳನನ್ನು, ಹುಚ್ಚು ನಾಯಿ ಅಟ್ಟಾಡಿಸಿದಂತೆ ನನ್ನನ್ನು ಅಟ್ಟಾಡಿಸಿದರು ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಹಲ್ಲೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದರು. ನಾನು ನಿನ್ನೆ ಮೂರೂವರೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ್ದೆ. ಮೊದಲು ಗಾರ್ಡ್ಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಆದ್ದರಿಂದ ಪೊಲೀಸರು ಪರಿಸ್ಥಿತಿ ಸ್ವಲ್ಪ ತಿಳಿಯಾದ ಬಳಿಕ ಬರುವಂತೆ ಹೇಳಿದ್ದರು. ಬಳಿಕ ನಾನು ಮೃತ ಮಹಿಳೆಯ ಬಳಿಗೆ ಆಗಮಿಸಿದಾಗ ಕೆಲ ಮಹಿಳೆಯರು ನನ್ನ ಮೇಲೆ ಹಲ್ಲೆ ನಡೆಸಿದರು.
ಈ ಸಂದರ್ಭ ಪೊಲೀಸರು ಇಲ್ಲಿಂದ ತೆರಳುವಂತೆ ಸೂಚಿಸಿದರು. ಆ ಸಂದರ್ಭದಲ್ಲಿಯೇ ಪೊಲೀಸರಿಗೂ ಮತ್ತು ನನ್ನ ಮೇಲೂ ಹಲ್ಲೆ ನಡೆಸಿದರು. ನನಗೆ ಚಪ್ಪಲಿಯಿಂದ ಹೊಡೆದರು ಎಂದು ನಿನ್ನ ನಡೆದ ಘಟನೆ ಬಗ್ಗೆ ವಿವರಣೆ ನೀಡಿದರು. ಬಳಿಕ ನಾನೇ ಓಡಿ ಬಂದು ಜೀಪಿನಲ್ಲಿ ಕುಳಿತೆ. ಜೀಪಿನ ಮೇಲೆಯೂ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ ಎಂದು ಹೇಳಿದರು.
ಇನ್ನು ಬನಿಯನ್ ಇದ್ದ ಕಾರಣ ಬಟ್ಟೆ ಹರಿದದ್ದು ಕಾಣಲಿಲ್ಲ. ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ, ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ ಎಂದು ಮೂಡಿಗೆರೆಯಲ್ಲಿ ಶಾಸಕ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಾನು ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಎಂದು ವ್ಯವಸ್ಥಿತ ಹಲ್ಲೆ ಮಾಡಲಾಗಿದೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನಾನು ಒಂದೇ ಒಂದು ಮಾತನಾಡಿಲ್ಲ, ಬಹಳ ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೂಲಕ ಎಲ್ಲ ಶಾಸಕರಿಗೂ ಸರ್ಕಾರ ಭದ್ರತೆ ನೀಡಬೇಕು. ನಾನು ಕಾಡು ಕಾಯಲ್ಲ, ಆನೆ ಸಾಕಿಲ್ಲ, ಸರ್ಕಾರಕ್ಕೆ ದೂರು ನೀಡಬಹುದು, ನೀಡುತ್ತೇನೆ ಎಂದರು.
ನಾನು ಕೋರ್ಟ್ ಅಲ್ಲ, ಕ್ಷೇತ್ರಕ್ಕೆ ಸಾಕಷ್ಟು ಹಣ ತಂದಿದ್ದೇನೆ. ಇಂದು ಹೋಗಿ ಎಲ್ಲರಿಗೂ ಸಾಂತ್ವನ ಹೇಳಿದ್ದೇನೆ. ಆನೆ ಸ್ಥಳಾಂತರಕ್ಕೆ ನಾಳೆಯೇ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿಗೆ ಹೋಗುತ್ತೇನೆ. ಈ ಬಗ್ಗೆ ಪಕ್ಷದ ವರಿಷ್ಠರು, ಸಿಎಂ, ಗೃಹ ಮಂತ್ರಿ ಗಮನಕ್ಕೆ ತರುತ್ತೇನೆ ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ಇದೇ ವೇಳೆ ಹೇಳಿದರು.
ಇದನ್ನೂ ಓದಿ : ಕಾಡಾನೆ ದಾಳಿಗೆ ಮಹಿಳೆ ಬಲಿ.. ಸ್ಥಳಕ್ಕೆ ಹೋದ ಶಾಸಕನ ಮೇಲೆ ಹಲ್ಲೆ ಮಾಡಿ ಅಂಗಿ ಹರಿದ್ರಾ ಗ್ರಾಮಸ್ಥರು!?